ಅಲ್ಪಸಂಖ್ಯಾತರು ಸರಕಾರಿ ಸೌಲಭ್ಯ ಪಡೆಯಲು ಹಿಂಜರಿಕೆ ಬೇಡ: ಅನ್ವರ್ ಸಅದಿ

Update: 2018-08-05 11:50 GMT

ಮೂಡಿಗೆರೆ, ಆ.5: ಅಲ್ಪಸಂಖ್ಯಾತ ವರ್ಗಕ್ಕೆ ಮೀಸಲಿರುವ ಅನುದಾನಗಳು ಸರ್ಕಾರದ ಖಜಾನೆಯಲ್ಲಿ ಕೊಳೆಯುತ್ತಾ ಬಿದ್ದಿದ್ದರೂ ಅದನ್ನು ಕೇಳಿ ಪಡೆಯುವ ಗುಣವನ್ನು ಹೊಂದದೇ ಅಲ್ಪಸಂಖ್ಯಾತರು ತಮಗೆ ತಾವೇ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನ ಸಅದಿಯಾ ಕಾಲೇಜ್ ಪ್ರಾಂಶುಪಾಲ ಅನ್ವರ್ ಸಅದಿ ವಿಷಾದ ವ್ಯಕ್ತಪಡಿಸಿದರು.

ಅವರು ಮೂಡಿಗೆರೆಯ ಬ್ರೈಟ್ ಫ್ಯೂಚರ್ ವೆಲ್‍ಫೇರ್ ಆರ್ಗನೈಸೇಷನ್ ಸಂಸ್ಥೆಯ ವತಿಯಿಂದ ಪಟ್ಟಣದ ಹಳೇ ಜೆಎಸ್ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಿರುದ್ಯೋಗಿ ಪದವೀಧರರಿಗೆ ಸರಕಾರದ ವಿವಿಧ ಹುದ್ದೆಗಳಿಗೆ ನೇಮಕಾತಿ ಕುರಿತು ಮಾಹಿತಿ ಶಿಬಿರದಲ್ಲಿ ಮಾತನಾಡಿದರು. ಸರಕಾರಿ ಹುದ್ದೆಗಳಿಗೆ ನಡೆದ ನೇಮಕಾತಿ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಭಾಗವಹಿಸುತ್ತಿಲ್ಲ. ಹೀಗಾಗಿ ಐಎಎಸ್ ಐಪಿಎಸ್ ಸಹಿತ ವಿವಿಧ ಹುದ್ದೆಗಳಲ್ಲಿ ಅಲ್ಪಸಂಖ್ಯಾತರು ತೀರಾ ಕಡಿಮೆ ಪ್ರಮಾಣದಲ್ಲಿದ್ದಾರೆ. ಸರಕಾರಿ ಹುದ್ದೆ ತಮಗೆ ದಕ್ಕದೆಂಬ ಭಾವನೆಯಿಂದ ಹೊರಬಂದು ಹುದ್ದೆ ಪಡೆಯಲು ಪ್ರಯತ್ನಿಸಿದರೆ ಸಫಲರಾಗಿ ಹುದ್ದೆ ಗಿಟ್ಟಿಸಿಕೊಳ್ಳಬಹುದು ಎಂದು ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್ ಮಾತನಾಡಿ, ಈ ಹಿಂದೆ ಅಲ್ಪಸಂಖ್ಯಾತರು ಶಿಕ್ಷಣ ಪಡೆಯದೆ ಸರ್ಕಾರಿ ಉದ್ಯೋಗದಿಂದ ವಂಚಿತರಾಗಿದ್ದರು. ಈಗ ಶಿಕ್ಷಣ ಪಡೆಯಲು ಯುವಜನಾಂಗ ಮುಂದೆ ಬಂದಿದೆ. ಹಾಗಾಗಿ ಸರ್ಕಾರದ ಸೌಲಭ್ಯ ಪಡೆಯಲು ಹಿಂಜರಿಕೆ ಬೇಡ. ಯುವಜನಾಂಗ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳನ್ನು ಓದುವುದರಿಂದ ಉದ್ಯೊಗದ ಮಾಹಿತಿಗಳು ದೊರಕುತ್ತದೆ. ಇದರಿಂದ ಸರ್ಕಾರಿ ಹುದ್ದೆಗಳಿಗೆ ಸಹಕಾರಿ ಹುದ್ದೆಗಳಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. 

ಈ ವೇಳೆ ಪ್ರಾಂಶುಪಾಲ ಅನ್ವರ್ ಸಅದಿ ಅವರನ್ನು  ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವೃತ್ತಿಪರ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಯಿತು. 

ಸಂಸ್ಥೆಯ ಮುಖ್ಯಸ್ಥ ಎಂ.ಎಚ್.ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಉದ್ಯಮಿ ಅಕ್ರಂ ಹಾಜಿ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಝಕರಿಯಾ ಜಾಕಿರ್, ಕಾಂಗ್ರೆಸ್ ಮುಖಂಡ ಇರ್ಷಾದ್, ಪೀಸ್ ಅಂಡ್ ಅವೇರ್‍ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ, ಮಲೆನಾಡು ಮುಸ್ಲಿಂ ವೇದಿಕೆ ಪ್ರಧಾನ ಕಾರ್ಯದರ್ಶಿ ಮಜೀದ್, ಮುಖಂಡರಾದ ಮೆಡಿಕಲ್ ಕರೀಂ, ಸುಲೈಮಾನ್ ಕೃಷ್ಣಾಪುರ, ಫಾರೂಕ್, ರಹಿಮಾನ್ ಇಂದ್ರವಳ್ಳಿ, ಅಝೀಝ್ ಬಣಕಲ್, ಫಾರೂಕ್ ಛತ್ರಮೈದಾನ, ಫಿಶ್ ಅಶ್ರಫ್, ತಮೀಮ್, ಹಂಝ, ಲತೀಫ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News