ಶೃಂಗೇರಿ: ಪ.ಪಂ. ನೂತನ ಅಧ್ಯಕ್ಷೆಯಾಗಿ ಶಾರದಾ ಗೋಪಾಲ್ ಆಯ್ಕೆ

Update: 2018-08-05 11:53 GMT

ಶೃಂಗೇರಿ, ಆ.5: ಪಟ್ಟಣದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ.ಪಂಚಾಯತ್ ಅಧ್ಯಕ್ಷೆಯಾಗಿ ಹನುಮಂತ ನಗರದ ಪಪಂ ಸದಸ್ಯೆ ಪರಿಶಿಷ್ಟ ಜಾತಿಯ ಶಾರದಾಗೋಪಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ.ಪಂ ಸಭಾಂಗಣದಲ್ಲಿ ಶನಿವಾರ ನಡೆದ ನೂತನ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ತಾ.ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಸ್.ನಟೇಶ್ ಮಾತನಾಡಿ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವ ಬಿಜೆಪಿ ಪಕ್ಷವು ನಿರಂತರವಾಗಿ ಪಾಲಿಸುತ್ತಾ ಬಂದಿದೆ. ಜನಪರ ಕಾರ್ಯನಿರ್ವಹಿಸಿ ಸಾಮಾನ್ಯರ ವಿಶ್ವಾಸ ಗಳಿಸುವುದು ಜನಪ್ರತಿನಿಧಿಗಳ ಆದ್ಯತೆಯಾಗಬೇಕು. ಆಗ ಅಂತಹ ಜನಪ್ರತಿನಿಧಿ ಉತ್ತಮ ನಾಯಕನಾಗಿ ಸಮಾಜದಲ್ಲಿ ಬೆಳೆಯಲು ಸಾಧ್ಯ. ಬಿಜೆಪಿ ಪಕ್ಷವು ಜಾತಿವಾದಿ ಪಕ್ಷವಲ್ಲ. ಎಲ್ಲಾ ಜನಾಂಗದವರಿಗೆ ಅವಕಾಶ ನೀಡುವ ಪಕ್ಷವಾಗಿದೆ ಎಂದ ಅವರು, ಪ.ಪಂ ಸದಸ್ಯರು ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡು ಮುನ್ನಡೆ ಸಾಧಿಸಬೇಕು ಎಂದರು.

ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಎಂ.ಗೋಪಾಲ್ ಮಾತನಾಡಿ, ಪ.ಪಂ ಅಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೂ ಕೂಡಾ ಪ.ಪಂ ಸದಸ್ಯರು ವಿಶಾಲತೆಯಿಂದ ಸಮಾಜದ ಕಟ್ಟಕಡೆಯ ಮಹಿಳೆಗೆ ಸ್ಥಾನಮಾನ ನೀಡಿದ್ದಾರೆ. ಅಧಿಕಾರದ ಅವಧಿಯಲ್ಲಿ ಬಂದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ವೈಯಕ್ತಿಕ ಹಿತಾಸಕ್ತಿ ಬದಿಗಿರಿಸಿ ಕೆಲಸ ಮಾಡಿದರೆ ಜನತೆ ನಿರಂತರ ನೆನಪಿಸಿಕೊಳ್ಳುತ್ತಾರೆ ಎಂದರು.

ನಿರ್ಗಮಿತ ಪ.ಪಂ ಅಧ್ಯಕ್ಷೆ ಡಾಲಕ್ಷ್ಮೀಪ್ರಸಾದ್ ಮಾತನಾಡಿ, ಅನುದಾನದ ಕೊರತೆಯಿದ್ದರೂ ಲಭ್ಯವಿರುವ ಹಣದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ತೃಪ್ತಿಯಿದೆ. ಗಾಂಧಿಮೈದಾನದ ಪಾರ್ಕಿಂಗ್ ಸ್ಥಳದಲ್ಲಿ ಸಿ.ಸಿ.ಟಿ.ವಿ, ಬೆಂಗಳೂರು ಜ್ಯೋತಿ ಇಂಜಿನಿಯರ್ಸ್ ಕಾಲೇಜಿನ ಪ್ರೊ.ಲಕ್ಷ್ಮೀನಾರಾಯಣ್ ಮಾಗದರ್ಶನದಲ್ಲಿ ಸ್ವಚ್ಛಭಾರತ್‍ನ ನೂತನ ಯೋಜನೆಗೆ ಚಾಲನೆ, ಮಲ್ಲಿಕಾರ್ಜುನ ಬೀದಿಯ ಡಾಂಬರೀಕರಣಕ್ಕಾಗಿ 14ನೇ ಹಣಕಾಸು ಯೋಜನೆಯಡಿ 6ಲಕ್ಷ ಹಣ ಬಿಡುಗಡೆ ಮುಂತಾದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದು, ಮುಂಬರುವ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಜೊತೆಗೂಡಿ ಶ್ರಮಿಸಲಿದ್ದೇವೆ. ರಾಜಕೀಯದಲ್ಲಿ ರಾಜಧರ್ಮವಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ  ಎಂದರು.

ನೂತನ ಪ.ಪಂ ಅಧ್ಯಕ್ಷೆ ಶಾರದಾ ಗೋಪಾಲ್ ಮಾತನಾಡಿ, ಪವಿತ್ರ ಕ್ಷೇತ್ರವಾದ ಶೃಂಗೇರಿಯ ಅಭಿವೃದ್ದಿಗೆ ಪ.ಪಂ ಸಂಪೂರ್ಣ ಸಹಕಾರವನ್ನು ಸರ್ವಸದಸ್ಯರು ನೀಡಲಿದ್ದಾರೆ. ನಾಗರಿಕರು ಕೂಡ ನಮ್ಮ ಜೊತೆ ಸಾಮಾಜಿಕ ಕಳಕಳಿಯಿಂದ ಕಾರ್ಯನಿರ್ವಹಿಸಬೇಕು, ಪಟ್ಟಣದ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುವ ಮಹತ್ತರವಾದ ಆಶಯ ನಮ್ಮಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಅಧ್ಯಕ್ಷ ವಿಜೇಶ್ ಕಾಮತ್, ಕಾರ್ಯದರ್ಶಿ ಆಶೋಕ್, ಬಿಜೆಪಿ ಮುಖಂಡರಾದ ಗೇರುಬ್ಯೆಲು ಶಂಕರಪ್ಪ, ಹರೀಶ್.ವಿ.ಶೆಟ್ಟಿ, ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ನಾಗರಾಜ್, ಸ್ವಚ್ಛಭಾರತ್ ರಾಯಭಾರಿ ಕುಮಾರಸ್ವಾಮಿ, ಜಿ.ಪಂ ಸದಸ್ಯರಾದ ಬಿ.ಶಿವಶಂಕರ್, ಶಿಲ್ಪಾರವಿ, ತಾ.ಪಂ ಅಧ್ಯಕ್ಷರಾದ ಜಯಶೀಲ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ, ಸದಸ್ಯೆ ಶಿಲ್ಪಾಮಂಜುನಾಥ್, ಪ.ಪಂ ಸದಸ್ಯರು, ಸಿಬ್ಬಂದಿವರ್ಗ ಇದ್ದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ನಾರಾಯಣ ರೆಡ್ಡಿ ಕಾರ್ಯನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News