ಬಿಜೆಪಿಯ ಹತ್ಯೆ ರಾಜಕಾರಣ ವಿರುದ್ಧ ಜನಜಾಗೃತಿ ಅಗತ್ಯ: ಪ್ರೊ.ಚಂದ್ರಶೇಖರ ಪಾಟೀಲ

Update: 2018-08-05 12:12 GMT

ಬೆಂಗಳೂರು, ಆ.5: ಬಿಜೆಪಿ ಹಾಗೂ ಸಂಘಪರಿವಾರದ ಪ್ರಗತಿಪರರು, ಪತ್ರಕರ್ತರ ಮೇಲೆ ನಡೆಸುತ್ತಿರುವ ಹಲ್ಲೆ ಹಾಗೂ ಹತ್ಯೆ ರಾಜಕಾರಣವನ್ನು ಜನ ಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ತಿಳಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ಕೋಮುವಾದಿ ಶಕ್ತಿಗಳಿಂದ ಹತ್ಯೆಯಾಗಿ ಸೆ.5ಕ್ಕೆ ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಲಂಕೇಶ್ ಗೌರಿ ಬಳಗವು ನಗರದ ಸೆಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಸ್‌ಐಟಿ ಪೊಲೀಸರ ಪ್ರಾಮಾಣಿಕ ಹಾಗೂ ದಕ್ಷ ತನಿಖೆಯಿಂದಾಗಿ ಪತ್ರಕರ್ತೆ ಗೌರಿ ಲಂಕೇಶ್‌ರವರ ಹತ್ಯೆಯ ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಎಸ್‌ಐಟಿ ಪೊಲೀಸ್ ಕಾರ್ಯದಕ್ಷತೆಗೆ ಇಡೀ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದಾರೆಂಬುದನ್ನು ಖಚಿತಪಡಿಸಿಕೊಂಡು, ಆ ಸಂಘಟನೆಯನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕಿದೆ ಎಂದು ಅವರು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ನಂತರ ರಾಜ್ಯಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಯುವ ಜನತೆ ಕೋಮುವಾದಿ ಶಕ್ತಿಗಳ ವಿರುದ್ಧ ಬೀದಿಗಿಳಿದಿದ್ದರು. ಆ ಯುವ ಶಕ್ತಿಯನ್ನು ವೈಚಾರಿಕವಾಗಿ ಸಂಘಟಿತಗೊಳಿಸಬೇಕಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗೌರಿ ಲಂಕೇಶ್ ಬಳಗವು ದೊಡ್ಡ ಶಕ್ತಿಯಾಗಿ ಬೆಳೆಯಬೇಕಿದೆ. ಜನಪರ ಚಿಂತನೆಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಬಳಗದ ಎಲ್ಲ ಸದಸ್ಯರು ತೊಡಗಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಆ.30ರಿಂದ ಸೆ.5ರವರೆಗೆ ನಡಯುವ ಹತ್ಯೆ ರಾಜಕೀಯ ವಿರೋಧಿ ಸಪ್ತಾಹವು ಯುವಶಕ್ತಿಯನ್ನು ಬೆಸೆಯಲಿ ಎಂದು ಅವರು ತಿಳಿಸಿದರು.

ಗೌರಿ ಮೆಮೋರಿಯಲ್ ಟ್ರಸ್ಟ್‌ನ ಪ್ರೊ.ವಿ.ಎಸ್.ಶ್ರೀಧರ್, ಮಾನವ ಹಕ್ಕು ಹೋರಾಟಗಾರ ಪ್ರೊ.ನಗರಗೆರೆ ರಮೇಶ್, ರೈತ ಮುಖಂಡ ವೀರ ಸಂಗಯ್ಯ, ದಲಿತ ಮುಖಂಡ ಎನ್.ವೆಂಕಟೇಶ್, ಗೌರಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆ.30ರಿಂದ ಕೋಮುವಾದಿ ವಿರೋಧಿ ಸಪ್ತಾಹ
ಆ.30ರಂದು ಹಿರಿಯ ಸಂಶೋಧಕ ಕಲಬುರ್ಗಿ ಹಾಗೂ ಸೆ.5ರಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೋಮುವಾದಿಗಳ ಗುಂಡೇಟಿಗೆ ಹತರಾದರು. ಹಾಗೂ ನಂತರದ ದಿನಗಳಲ್ಲೂ ಕೋಮುವಾದಿಗಳ ಉಪಟಳ ಮಿತಿಮೀರಿದ್ದು, ದೇಶಾದ್ಯಂತ ಹಲವು ಪತ್ರಕರ್ತರ ಮೇಲೆ ಗಂಭೀರ ಪ್ರಮಾಣದ ಹಲ್ಲೆಗಳಾಗಿವೆ. ಈ ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಹಲ್ಲೆಗಳನ್ನು ಸಮರ್ಥವಾಗಿ ಎದುರಿಸಲು ಯುವಜನತೆಯನ್ನು ಸಜ್ಜುಗೊಳಿಸಬೇಕಿದೆ. ಹಾಗೂ ಜನಸಾಮಾನ್ಯರಲ್ಲಿ ಕೋಮುವಾದಿಗಳ ಕೊಲೆಗಡುಕತನದ ವಿರುದ್ಧ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಆ.3ರಿಂದ ಸೆ.5ರವರೆಗೆ ‘ಹತ್ಯೆ ರಾಜಕಾರಣ ವಿರೋಧಿ ಸಪ್ತಾಹ’ವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ಉದ್ದೇಶಿಸಿದ್ದೇವೆ. 

-ಕೆ.ಎಲ್.ಅಶೋಕ್, ಸಂಚಾಲಕ ಗೌರಿ ಲಂಕೇಶ್ ಬಳಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News