ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್

Update: 2018-08-05 12:44 GMT

ಬೆಂಗಳೂರು, ಜು.5: ಸೆಷನ್ಸ್ ನ್ಯಾಯಾಲಯ ಪಾಟೀ ಸವಾಲಿಗೆ ಅವಕಾಶ ನೀಡಿಲ್ಲ ಎಂಬ ಪ್ರಾಸಿಕ್ಯೂಷನ್ ಆಕ್ಷೇಪಣೆಗೆ ಸಂಬಂಧಿಸಿದಂತೆ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪ್ರಕರಣದ ಮರು ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ. ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ಅವರು, ಪ್ರಕರಣದಲ್ಲಿ ಆರೋಪಿಗೆ ಸೂಕ್ತ ಕಾನೂನು ನೆರವು ದೊರೆತಿಲ್ಲ ಮತ್ತು ಪಾಟೀ ಸವಾಲಿನ ವಿಚಾರಣೆ ನಡೆದಿಲ್ಲ. ಹಾಗಾಗಿ ಶಿಕ್ಷೆ ಕಾಯಂಗೊಳಿಸುವುದು ಸೂಕ್ತವಲ್ಲ ಎಂಬ ವಾದ ಮಂಡಿಸಿದರು.

ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಇದೊಂದು ಅಪರೂಪದಲ್ಲಿಯೇ ಅಪರೂಪದ ಪ್ರಕರಣ. ಪ್ರಾಸಿಕ್ಯೂಷನ್ ಕೆಲಸ ಕೇವಲ ಶಿಕ್ಷೆ ಕೊಡಿಸುವುದಲ್ಲ. ಆರೋಪಿಗೆ ಅನ್ಯಾಯವಾದಾಗ ಅದನ್ನು ಕೋರ್ಟ್ ಗಮನಕ್ಕೆ ತರಬೇಕಾದ ಜವಾಬ್ದಾರಿಯೂ ಇರುತ್ತದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ನಿಲುವು ಸೂಕ್ತವಾಗಿದೆ ಎಂದು ಶ್ಲಾಘಿಸಿದೆ.

ಬನಶಂಕರಿ ಬಡಾವಣೆ ಎರಡನೆ ಹಂತದ ನಿವಾಸಿ ಅನಿಲ್ ಬಳಗಾರ್ ಎಂಬ ಆರೋಪಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶಿಕ್ಷೆ ಕಾಯಂಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ರೆಫರ್ಡ್ ಕೇಸ್ ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News