ವಿದ್ಯಾರ್ಥಿಗಳಲ್ಲೂ ಸಾಮಾಜಿಕ ಕಾಳಜಿ ಅಗತ್ಯ: ಎಂಎಲ್‍ಸಿ ಸುನಿಲ್ ಸುಬ್ರಮಣಿ

Update: 2018-08-05 12:52 GMT

ಮಡಿಕೇರಿ, ಆ.5: ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸದಾ ಸಿದ್ಧರಿರಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಕರೆ ನೀಡಿದ್ದಾರೆ.

ನಗರದ ಫೀಲ್ಡ್ ಮಾರ್ಷಿಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಭಾಗಂಣದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮ ಗಾಂಧಿ ಕಂಡ ಕನಸಿನ ಕೂಸು. ಸೇವೆ ಎನ್ನುವುದು ರಾಷ್ಟ್ರಿಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ಸೇವಾ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು, ಸಮಾಜಿಕ ಕಳಕಳಿಯ ಮೂಲಕ ಆರೋಗ್ಯಕರ ಸಮಾಜವನ್ನು ಕಟ್ಟಿ ಬೆಳೆಸಲು ಸನ್ನದ್ಧರಾಗಿರಬೇಕು ಎಂದು ಸುನಿಲ್ ಸುಬ್ರಮಣಿ ಸಲಹೆ ನೀಡಿದರು.

ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗಿರದೆ ಸಾಮಾಜಿಕ ಕಾಳಜಿಯನ್ನು ಕೂಡ ತೋರಬೇಕು. ಪರಿಶ್ರಮದಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಸಾಧನೆಯನ್ನು ಮಾಡಬೇಕು. ಮೊಬೈಲ್ ನಲ್ಲಿ ಕಾಲಹರಣ ಮಾಡದೆ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು.  

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಎಂ.ಕೆ.ಮಾಧವ ಮಾತನಾಡಿ ವಿದ್ಯಾರ್ಥಿ ಜೀವನದದಿಂದಲೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದರು. ನಿರಂತರ ಪರಿಶ್ರಮದಿಂದ ಮಾತ್ರ ಜೀವನದ ಗುರಿ ಸಾಧಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟ ಅವರು ರಾಷ್ಟ್ರೀಯ ಸೇವಾ ಯೋಜನೆ ಶ್ರಮದ ಪಾಠವನ್ನು ಕಲಿಸಿಕೊಡುತ್ತದೆ ಎಂದರು. 

ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮ, ರಾಷ್ಟ್ರಸೇವೆ, ಸ್ವಚ್ಛ ಮನಸ್ಸು, ಸ್ವಚ್ಛ ಭಾರತ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನಡೆಯಿತು.

ಕಾಲೇಜಿನ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪಿ.ಎ.ಗೀತಾಂಜಲಿ, ಉಪನ್ಯಾಸಕರಾದ ಪಿ.ಸಿ.ಮಂಜುನಾಥ ಗೌಡ, ಎನ್.ಟಿ.ಸಚಿನ್ ಹಾಗೂ ಎನ್‍ಎಸ್‍ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News