ದಾವಣಗೆರೆ: ಭದ್ರಾ ನಾಲೆಗೆ ಬಾಗಿನ ಅರ್ಪಣೆ
ದಾವಣಗೆರೆ,ಆ.05: ಕೊನೇ ಭಾಗದ ರೈತರಿಗೆ ನೀರು ತಲುಪದೇ ಇರುವುದಕ್ಕೆ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಭಾರತೀಯ ಒಕ್ಕೂಟ ಆಶ್ರಯದಲ್ಲಿ ಭದ್ರಾನಾಲೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದಿನ ಬಿಜೆಪಿ ಆಡಳಿತದಲ್ಲಿ ಕೊನೆಯ ಭಾಗದ ರೈತರಿಗೆ ತಲುಪಿಸುವ ಉದ್ದೇಶದಿಂದ ಭದ್ರಾನಾಲೆ ಅಧುನೀಕರಣವಾಗಿತ್ತು. ಅದರೆ, ಇಂದಿನ ಸರ್ಕಾರದ ಆಡಳಿತದಲ್ಲಿ ನಾಲೆಯಲ್ಲಿದ್ದ ಶೀಲ್ಟ್ (ಕಸ) ತೆಗೆಯದೇ ಕೊನೆ ಭಾಗದ ರೈತರಿಗೆ ನೀರಿಲ್ಲದೆ ಬೆಳೆಯ ನಷ್ಟ ಅನುಭವಿಸಬೇಕಾಯಿತು. ಈ ಕೊನೆ ಭಾಗದ ರೈತರಿಗೆ ನೀರು ತಲುಪಿಸಬೇಕೆಂಬ ಉದ್ದೇಶದಿಂದ ರೈತರ ಒಕ್ಕೂಟ ಹೆಚ್ಚು ಶ್ರಮಿಸುತ್ತಿದ್ದು, ಇದಕ್ಕೆ ಸರ್ಕಾರವು ಸ್ಪಂದಿಸಬೇಕು ಎಂದರು.
ಇಂದಿನ ಸರ್ಕಾರದಲ್ಲಿ ಯಾವುದೇ ತರಹದ ಯೋಜನೆಗಳಾಗಲಿ, ನಾಲಾ ಅಧುನೀಕರಣ ಅಗಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗುತ್ತಾರೆ, ನಮ್ಮ ಜಿಲ್ಲೆಯ ಮೂರು ಜನರು ಮಂತ್ರಿಗಳಾಗುತ್ತಾರೆಂಬ ಖುಷಿ ಇತ್ತು. ಅದರೆ ಅಂಕಿ-ಸಂಖ್ಯೆಯಲ್ಲಿ ಕೇವಲ 37ಸ್ಥಾನ ಪಡೆದಂತಹವರು ಮುಖ್ಯಮಂತ್ರಿಗಳಾಗಿರುವುದರಿಂದ ನಮಗೆ ಅಧಿಕಾರ ಕೈ ತಪ್ಪಿತು. ಈಗ ಅಧಿಕಾರಕ್ಕೆ ಬಂದಂತಹ ಮುಖ್ಯಮಂತ್ರಿಗಳು ನಾನಾತರಹದ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಕರ್ನಾಟಕದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ಕೆ ಅಡಿಪಾಯ ಹಾಕಿದ್ದೇ ದಾವಣಗೆರೆ ಜಿಲ್ಲೆಯಿಂದ. ಈ ಮೊದಲು ಹಳ್ಳಿಗಳಲ್ಲಿ ಕೆರೆ-ಕಟ್ಟಿಗಳು ತುಂಬಿದ್ದಾಗ ಪೂಜೆ ಸಲ್ಲಿಸುವ ಪದ್ದತಿ ನಡೆಯುತ್ತಿತ್ತು. ದಾವಣಗೆರೆ ಜಿಲ್ಲೆ ಭಾರತೀಯ ರೈತ ಒಕ್ಕೂಟ ಭದ್ರಾ ಡ್ಯಾಂಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಅಡಿಪಾಯ ಹಾಕಿದ್ದು, ಇಂದು ರಾಜ್ಯದ ಎಲ್ಲಾ ಮಂತ್ರಿಗಳು ಈ ಪದ್ಧತಿಯನ್ನು ಮುಂದುವರೆಸಿದ್ದಾರೆ ಎಂದರು.
ಜಗಳೂರು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಿಲ್ಲೆಯ 7 ಕ್ಷೇತ್ರಗಳಿಗೂ ಭದ್ರಾ ನೀರು ಹರಿಯುತ್ತಿದ್ದು, ಅದರೆ ಕ್ಷೇತ್ರದ ಕೊನೆ ಭಾಗವಾಗಿರುವ ಜಗಳೂರು ಕ್ಷೇತ್ರಕ್ಕೆ ನೀರು ತಲುಪುತ್ತಿಲ್ಲ. ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ನೀರು ತಲುಪಿಸಲು ಪಕ್ಷದ ಹಿರಿಯ ಮುಖಂಡರುಗಳು ಶ್ರಮಿಸಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಎಸ್. ಈಶ್ವರಪ್ಪ, ಪ್ರೊ. ಲಿಂಗಣ್ಣ, ಮಾಡಾಳ್ ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಜಿಪಂ ಪ್ರಭಾರ ಅಧ್ಯಕ್ಷೆ ಸವಿತಾಕಲ್ಲೇಶಪ್ಪ, ಬಿಜೆಪಿ ಮುಖಂಡರುಗಳಾದ ಹೆಚ್.ಎಸ್. ನಾಗರಾಜ್, ಅಣಜಿನಾಗರಾಜ್, ಬಸವರಾಜಪ್ಪ, ವಿರೇಶ್ ಹನಗವಾಡಿ, ಜಗದೀಶ್, ಕೆ.ಎನ್. ಓಂಕಾರಪ್ಪ, ಹೆಚ್.ಎನ್.ಶಿವಕುಮಾರ್, ಭಾರತೀಯ ರೈತ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶಾನಬೋಗ್ ನಾಗರಾಜ್, ಎ.ಸಿ. ಜಯಣ್ಣ ಇದ್ದರು.