ಗುಂಡ್ಲುಪೇಟೆ: ನೊಟೀಸ್ ನೀಡಲು ಹೋಗಿದ್ದ ಅರಣ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನ; ಆರೋಪ

Update: 2018-08-05 13:15 GMT

ಗುಂಡ್ಲುಪೇಟೆ,ಆ.05: ಹುಲಿ ಯೋಜನೆಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮ ನಿರ್ಮಾಣ ನಿಲ್ಲಿಸುವಂತೆ ನೊಟೀಸ್ ನೀಡಲು ಹೋಗಿದ್ದ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆನ್ನಲಾದ ರೆಸಾರ್ಟ್ ಮಾಲಿಕನ ವಿರುದ್ದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.4 ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ಪ್ರದೇಶದ ಮಗುವಿನಹಳ್ಳಿ ರಸ್ತೆಯಲ್ಲಿ ಸನಂ 218/5 ಹಾಗೂ 218/6ರಲ್ಲಿ ಜಮೀನು ಹೊಂದಿರುವ ರಾಜಸ್ಥಾನ ಮೂಲದ ಬಿ.ಸುನಿಲ್ ಬಿನ್ ಶರ್ಮ ಎಂಬವರು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಗೋಪಾಲಸ್ವಾಮಿಬೆಟ್ಟ ವಲಯದ ಸಿಬ್ಬಂದಿ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ನೊಟೀಸ್ ನೀಡಲು ಹೋಗಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ನೊಟೀಸ್ ಪಡೆಯದೆ ಕಳುಹಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆರ್‍ಎಫ್‍ಓ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ತೆರಳಿ ನೊಟೀಸ್ ತೆಗೆದುಕೊಳ್ಳುವಂತೆ ಹೇಳಿದಾಗ ಸುನಿಲ್ ಹಾಗೂ ಸಹಚರರು ಮತ್ತೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ. ಅಲ್ಲದೆ ಘಟನೆಯ ವಿಡಿಯೋ ಮಾಡುತ್ತಿದ್ದ ಸಿಬ್ಬಂದಿಯಿಂದ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದು, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿ ಮತ್ತೊಮ್ಮೆ ಬರದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರ್‍ಎಫ್‍ಓ ಪುಟ್ಟಸ್ವಾಮಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News