ಆ.13 ಕ್ಕೆ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮನ

Update: 2018-08-05 13:37 GMT

ಬೆಂಗಳೂರು, ಆ. 5: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆ.13ಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್‌ಗೆ ಆಗಮಿಸಲಿದ್ದು, ಚುನಾವಣಾ ಪ್ರಚಾರ ಕಾರ್ಯಕ್ಕೆ ಕರ್ನಾಟಕ ರಾಜ್ಯದಿಂದಲೇ ವಿದ್ಯುಕ್ತ ಚಾಲನೆ ನೀಡಲಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ ತಿಳಿಸಿದ್ದಾರೆ.

ರವಿವಾರ ಬೀದರ್ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆ.13ರ ಬೆಳಗ್ಗೆ ನೆಹರೂ ಕ್ರೀಡಾಂಗಣದಲ್ಲಿ ಪಕ್ಷದಿಂದ ಏರ್ಪಡಿಸಿರುವ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದು, ಇದೇ ವೇಳೆ ಅವರನ್ನು ಅಭಿನಂದಿಸಲಾಗುವುದು ಎಂದರು.

ಡಿಸೆಂಬರ್ ಅಥವಾ ಜನವರಿಯಲ್ಲಿ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ದುರಾಡಳಿತ ಕೊನೆಗೊಳಿಸಲು ವೇದಿಕೆ ಸಿದ್ಧವಾಗಿದೆ. ಚುನಾವಣಾ ಪೂರ್ವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿಶ್ಚಿತ ಎಂದು ಅವರು ಘೋಷಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಭಿನಂದನಾ ಸಮಾರಂಭದಲ್ಲಿ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 20ಸಾವಿರ ಜನ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಶಾಸಕರು ಹಾಗೂ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News