ಸಮ್ಮಿಶ್ರ ಸರಕಾರದ ಸಾಧನೆ ಶೂನ್ಯ: ಯಡಿಯೂರಪ್ಪ
ಮೈಸೂರು,ಆ.5: ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದ 41 ಲಕ್ಷ ವಲಸಿಗರ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಂಡರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಮತಾ ಬ್ಯಾನರ್ಜಿ ವಿರೋಧಿಸುತ್ತಾರೆ. ಇಂತಹ ಗಂಭೀರ ವಿಚಾರದಲ್ಲೂ ರಾಜಕೀಯ ಮಾಡುತ್ತಾರೆ ಎಂದು ಯಡಿಯೂರಪ್ಪ ಕಿಡಿಕಾರಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಏರ್ಪಡಿಸಿದ್ದ ಮೈಸೂರು ನಗರ ಮತ್ತು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಬೇರೆ ದೇಶದ ಜನರಿಗೆ ಇಲ್ಲಿ ಅವಕಾಶ ಮಾಡಿಕೊಡಬೇಕೆನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರಕಾರದ ಸಾಧನೆ ಶೂನ್ಯ. ಸಹಕಾರ ಕ್ಷೇತ್ರ ದಿವಾಳಿಯಾಗುತ್ತಿದೆ. ಹೊಸ ಸಾಲವು ಸಿಗುತ್ತಿಲ್ಲ, ಹಳೆಯ ಸಾಲವು ತೀರುತ್ತಿಲ್ಲ. ಸಾಲ ಮನ್ನಾ ಎಂಬ ಭ್ರಮೆಯಲ್ಲಿ ರೈತ ಸಮುದಾಯವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭೆಗೆ ಶೋಭಾ ಸ್ಪರ್ಧೆ; ಮುಂಬರುವ ಲೋಕಸಭಾ ಚುನಾವಣೆಗೆ ಸಂಸದೆ ಶೊಭಾ ಕರಂದ್ಲಾಜೆ ಸ್ಪರ್ಧೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.