5 ನೇ ಹಾಸನ ದಲಿತ ಮತ್ತು ಜನಪರ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹೆಚ್.ಕೆ. ಸಂದೇಶ್ ಆಯ್ಕೆ
ಹಾಸನ,ಆ.05: ನಾಗಭೂಮಿ ವಿವಿದೋದ್ದೇಶ ಅಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುವ 5 ನೇ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಸಾಹಿತ್ಯ ಸಮ್ಮೇಳನಧ್ಯಕ್ಷರನ್ನಾಗಿ ಹಿರಿಯ ದಲಿತ ಮುಖಂಡ, ಚಿಂತಕ ಹಾಗೂ ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕ ಹೆಚ್.ಕೆ. ಸಂದೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಗರದ ಮಾನವ ಬಂಧುತ್ವ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ದಲಿತ ಸಂಘಟನೆಗೆ ಸಲ್ಲಿಸಿದ ಸೇವೆ, ಸುದೀರ್ಘ ಹೋರಾಟ ಹಾಗೂ ದಲಿತ ಪರ ಚಿಂತನೆಗಳನ್ನು ಆಧರಿಸಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಹೆತ್ತೂರು ತಿಳಿಸಿದರು.
ಸಮ್ಮೇಳನಾಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಈ ಭಾರಿ ಚಳುವಳಿಗೆ ಕೊಡುಗೆ ಕೊಟ್ಟವರನ್ನು ಆಯ್ಕೆ ಮಾಡಬೇಕೆಂದು ತೀರ್ಮಾನಿಸಲಾಯಿತು. ಜಿಲ್ಲೆಯ ದಲಿತ ಚಳುವಳಿಯ ಹಿರಿಯ ನಾಯಕಯರಾದ ಕೆ. ಈರಪ್ಪ, ನಾರಾಯಣದಾಸ್ ಹಾಗೂ ಶಂಕರ್ ರಾಜ್ ಅವರ ಹೆಸರುಗಳು ಪ್ರಸ್ತಾಪವಾದವಾದರೂ ಅಂತಿಮವಾಗಿ ದಲಿತ ಚಳುವಳಿಯ ಹಿರಿಯ ನಾಯಕ, ತ್ಯಾಗಿ, ಒಡನಾಡಿ ಆಗಿದ್ದ ಹೆಚ್.ಕೆ. ಸಂದೇಶ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಸಮ್ಮೇಳನ ಅಕ್ಟೋಬರ್ 7 ಕ್ಕೆ ಹಾಸನದ ಕಲಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಹಿರಿಯ ಹೋರಾಟಗಾರ, ಹಾಗೂ ಜಾನಪದ ಗಾಯಕ ಗ್ಯಾರಂಟಿ ರಾಮಣ್ಣ, 70 ರ ದಶಕದ ದಲಿತ ಹೋರಾಟದ ಮುಂಚೂಣಿಯ ನಾಯಕರಲ್ಲಿ ಒಬ್ಬರಾದ ಸಂದೇಶ್ ಅವರ ಹೋರಾಟವೇ ಒಂದು ಕಾವ್ಯ ಇದ್ದಂತೆ. ಈ ಭಾರಿ ಗುಣಮಟ್ಟದ ಸಮ್ಮೇಳನ ನಡೆಸುವ ಮೂಲಕ ಜಿಲ್ಲೆಯ ದಲಿತ ಚಳುವಳಿ ನೆನಪನ್ನು ತೆರೆದಿಡಬೇಕು. ಸಂದೇಶ್ ಅವರಿಗೆ ಗೌರವಿಸಿಸುವುದು ಇಡೀ ದಲಿತ ಚಳುವಳಿಗೆ ಗೌರವಿಸಿದಂತೆ. ಜಿಲ್ಲೆಯ ಎಲ್ಲಾ ದಲಿತ ನಾಯಕರನ್ನು ಒಳಗೊಂಡ ಪುಸ್ತವನ್ನು ಹೊರತರಬೇಕು ಎಂದು ನುಡಿದರು.
ಪೌರ ಕಾರ್ಮಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಸರ್ಕಾರಿ ನೌಕಕರಾಗಿ ನಿವೃತ್ತಿ ಹೊಂದಿರುವ ಸಂದೇಶ್ ಇಡೀ ಜೀವನವನ್ನು ದಲಿತರು, ಶೋಷಿತರ ಪರವಾಗಿ ಸಮರ್ಪಿಸಿಕೊಂಡಿದ್ದಾರೆ. ಅವರನ್ನು ಸಮ್ಮೇಳನಧ್ಯಕ್ಷರನ್ನಾಗಿ ಮಾಡುವುದರಿಂದ ಅವರ ಹೋರಾಟಕ್ಕೆ ಬಲ ನೀಡಬೇಕೆಂದು ನುಡಿದರು.
ಪ್ರಕೃತಿ ಸೇವಾ ಸಂಸ್ಥೆಯ ವರ್ಷಾ ಮಾತನಾಡಿ, ಈ ಭಾರಿ ಸಮ್ಮೇಳನದಲ್ಲಿ ಪೌರ ಕಾರ್ಮಿಕರು ಹಾಗೂ ಮಂಗಳಮುಖಿಯರ ಹಕ್ಕುಗಳ ಕುರಿತು ವಿಷಯ ಇಡಬೇಕು ಮತ್ತು ಈ ಕುರಿತಂತೆ ನಾಟಕ ಪ್ರದರ್ಶನ ನಡೆಸಬೇಕೆಂದು ಸಲಹೆ ನೀಡಿದರು.
ಪೌರ ಕಾರ್ಮಿಕ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ನಲ್ಲಪ್ಪ, ಪ್ರಕೃತಿ ಸೇವಾ ಸಂಸ್ಥೆಯ ಅಶ್ವಥ್, ಮಹಿಳಾ ಹೋರಾಟಗಾರ್ತಿ ಶೋಭಾ, ಕರ್ನಾಟಕ ರಾಜ್ಯ ಮಾನವ ಹಕ್ಕು ಹಾಗೂ ಪತ್ರಕರ್ತರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎನ್. ಮೂರ್ತಿ, ಮಾರ, ಭವ್ಯ ನಾಗರಾಜ್, ಮುನಿಯಪ್ಪ, ದೇವರಾಜ್, ಗೋವಿಂದರಾಜ್ , ಶಾಂತರಾಜ್, ರಾಮು, ಪರಶು, ಸಣ್ಣಪ್ಪಯ್ಯ ಪರಶುರಾಮ್ ಕೃಷ್ಣ ಮೊದಲಾದವರು ಇದ್ದರು.