ಶಿವಮೊಗ್ಗ: ಮ್ಯಾನ್‍ಹೋಲ್ ಗೆ ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು
ಶಿವಮೊಗ್ಗ, ಆ. 6: ಹೊಸದಾಗಿ ನಿರ್ಮಿಸಲಾದ ಒಳಚರಂಡಿಯ ಮ್ಯಾನ್‍ಹೋಲ್ ಸ್ವಚ್ಚತೆಗಿಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದ ಎನ್.ಟಿ.ರಸ್ತೆಯ ನಾಗರಹಳ್ಳಿ ಗ್ಯಾಸ್ ಏಜೆನ್ಸಿ ಸಮೀಪದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಬೆಂತೆಕಟ್ಟೆ ನಿವಾಸಿಗಳಾದ, ಭೋವಿ ಸಮುದಾಯಕ್ಕೆ ಸೇರಿದ ಅಂಜನಿ (18) ಹಾಗೂ ವೆಂಕಟೇಶ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ. ಮ್ಯಾನ್‍ಹೋಲ್‍ನಿಂದ ಶವಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರನ ವಿರುದ್ದ ದೂರು ದಾಖಲಾಗಿದೆ. ಜೊತೆಗೆ ಕಾರ್ಮಿಕರನ್ನು ಕರೆತಂದ ತಿಪ್ಪೇಶಿ ಎಂಬ ವ್ಯಕ್ತಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರನ ವಿರುದ್ಧ ಐಪಿಸಿಯ ವಿವಿಧ ಕಲಂಗಳಡಿ ಪೊಲೀಸರು ಎಫ್‍ಐಆರ್ ದಾಖಲಿಸುವ ಸಾಧ್ಯತೆಗಳಿವೆ.
ಘಟನೆಯ ಹಿನ್ನೆಲೆ: ಶಿವಮೊಗ್ಗ ನಗರದಲ್ಲಿ ಕರ್ನಾಟಕ ನೀರು ಸರಬರಾಜು ಮಂಡಳಿಯು ಕಳೆದ ಹಲವು ವರ್ಷಗಳಿಂದ ಒಳಚರಂಡಿ ಕಾಮಗಾರಿ ನಡೆಸುತ್ತಿದೆ. ಆಂಧ್ರಪ್ರದೇಶ ಮೂಲದ ಗುತ್ತಿಗೆದಾರನೋರ್ವ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದಾರೆ. ಕಾಮಗಾರಿಯು ಇತ್ತೀಚೆಗೆ ಹಲವೆಡೆ ಪೂರ್ಣ ಹಂತಕ್ಕೆ ಬಂದಿದ್ದು, ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಒಳಚರಂಡಿ ಹಾಗೂ ಯುಜಿಡಿಗಳಲ್ಲಿ ನೀರು ಹರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಕಸಕಡ್ಡಿ ತುಂಬಿಕೊಂಡಿದ್ದರೆ ಅದನ್ನು ಸ್ವಚ್ಚಗೊಳಿಸುವ ಕೆಲಸ ನಡೆಸಲಾಗುತ್ತಿದೆ. ಇದಕ್ಕಾಗಿ ಗುತ್ತಿಗೆದಾರರ ಕಡೆಯವರು ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ವಿವಿಧೆಡೆಯಿಂದ ಕಾರ್ಮಿಕರನ್ನು ಕರೆತಂದಿದ್ದಾರೆ. ಮೃತಪಟ್ಟ ಅಂಜನಿ ಹಾಗೂ ವೆಂಕಟೇಶ್‍ರವರು ಕೂಡ ಕೆಲ ದಿನಗಳ ಹಿಂದಷ್ಟೆ ಊರಿನಿಂದ ಬಂದಿದ್ದರು.
ದುರಂತದ ವಿವರ: ಸುಮಾರು 20 ರಿಂದ 25 ಅಡಿ ಆಳವಿರುವ ಮ್ಯಾನ್‍ಹೋಲ್‍ನ ಪರಿಶೀಲನೆ ವೇಳೆ ಸರಾಗವಾಗಿ ನೀರು ಹರಿದು ಹೋಗದಿರುವುದು ಪತ್ತೆಯಾಗಿದ್ದು, ಈ ಕಾರಣದಿಂದ ಮೊದಲು ಅಂಜನಪ್ಪರನ್ನು ಮ್ಯಾನ್‍ಹೋಲ್ ಕೆಳಗಿಳಿಸಲಾಗಿದೆ. ಆದರೆ ಹಲವು ನಿಮಿಷಗಳಾದರೂ ಅಂಜನಪ್ಪ ಮೇಲಕ್ಕೆ ಬಂದಿಲ್ಲ. ಇದರಿಂದ ಅನುಮಾನಗೊಂಡ ವೆಂಕಟೇಶ್‍ರವರು ಕೆಳಕ್ಕಿಳಿದಿದ್ದು, ಅವರು ಕೂಡಾ ಮೇಲಕ್ಕೆ ಬರದೇ ಇದ್ದಾಗ ಪರಿಶೀಲನೆ ನಡೆಸಿದಾಗ ಇಬ್ಬರು ಕಾರ್ಮಿಕರೂ ಉಸಿರುಗಟ್ಟಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದು, ಮ್ಯಾನ್‍ಹೋಲ್‍ನಿಂದ ಶವಗಳನ್ನು ಮೇಲಕ್ಕೆ ತೆಗೆಯಲಾಗಿದೆ.
'ಹಲವು ತಿಂಗಳುಗಳಿಂದ ಮ್ಯಾನ್‍ಹೋಲ್ ಅನ್ನು ಮುಚ್ಚಲಾಗಿದ್ದು, ಇದರಿಂದ ಸಾಮಾನ್ಯವಾಗಿ ಒಳಭಾಗದಲ್ಲಿ ವಿಷಾನಿಲ ತುಂಬಿಕೊಂಡಿರುತ್ತದೆ. ಹಾಗೆಯೇ 20 ಅಡಿಗೂ ಹೆಚ್ಚು ಆಳವಿರುವುದರಿಂದ ಕೆಳಭಾಗದಲ್ಲಿ ಆಮ್ಲಜನಕದ ಪ್ರಮಾಣ ಕೂಡ ಕಡಿಮೆಯಿರುತ್ತದೆ. ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗಿಳಿಸಿದ್ದರಿಂದ ಈ ದುರಂತ ಸಂಭವಿಸಿದೆ' ಎಂಬ ಆರೋಪ ಕೇಳಿಬಂದಿದೆ.