ನಾಳೆ ರಾಷ್ಟ್ರವ್ಯಾಪಿ ಸಾರಿಗೆ ನೌಕರರ ಮುಷ್ಕರ

Update: 2018-08-06 16:46 GMT

ಬೆಂಗಳೂರು, ಆ. 6: ಕೇಂದ್ರದ ‘ಮೋಟಾರು ವಾಹನ ತಿದ್ದುಪಡಿ ಮಸೂದೆ’ಯನ್ನು ಹಿಂಪಡೆಯಬೇಕೆಂದು ಸಾರಿಗೆ ನೌಕಕರು ಕರೆ ನೀಡಿರುವ ಆ.7 ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ.

ಆದರೆ, ಈ ಮಧ್ಯೆ ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಬೆಂಬಲ ನೀಡಿಲ್ಲ. ಹೀಗಾಗಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಇರಲಿದೆ. ಅಲ್ಲದೆ, ಶಾಲಾ-ಕಾಲೇಜುಗಳಿಗೆ ಯಾವುದೇ ರಜೆ ನೀಡಿಲ್ಲ. ನಮ್ಮ ಮೆಟ್ರೋ ಕೂಡ ಇರಲಿದೆ. ಆದುದರಿಂದ ಸಾರಿಗೆ ಕಾರ್ಮಿಕರ ಮುಷ್ಕರ ಸಾರ್ವಜನಿಕ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದೆ.

ಆದರೆ, ಮುಷ್ಕರಕ್ಕೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು, ಓಲಾ ಮತ್ತು ಉಬರ್ ಚಾಲಕರು ಮತ್ತು ಮಾಲಕರ ಸಂಘ ಬೆಂಬಲ ಪ್ರಕಟಿಸಿದ್ದು, ಆ್ಯಪ್ ಆಧಾರಿತ ಆಟೋ ರಿಕ್ಷಾ, ಓಲಾ, ಉಬರ್ ಟ್ಯಾಕ್ಸಿಗಳು ನಾಳೆ(ಆ.7) ರಸ್ತೆಗೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಜನ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಬೇಕು, ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು/ ಮಾಲಕರ ರಕ್ಷಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಗೆ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಒಕ್ಕೂಟವಾದ ಸಿಐಟಿಯು ದೇಶಾದ್ಯಂತ ನಡೆಯುತ್ತಿರುವ ಮುಷ್ಕರಕ್ಕೆ ಕರೆ ನೀಡಿದೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ನಾಳೆ ಕರ್ತವ್ಯಕ್ಕೆ ಹಾಜರಾಗದೆ ಬೆಂಗಳೂರಿನ ಪುರಭವನದಿಂದ ಸ್ವಾತಂತ್ರ ಉದ್ಯಾನವನದ ವರೆಗೆ ಬೃಹತ್ ರ್ಯಾಲಿ ನಡೆಸಲಿದ್ದು, ಫ್ರೀಡಂ ಪಾರ್ಕಿನಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಸಾರ್ವಜನಿಕ ಉದ್ದಿಮೆಗಳ ನಾಶಕ್ಕೆ ಮುಂದಾಗಿರುವ ಮಸೂದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಲಾಗುವುದು ಎಂದು ತಿಳಿಸಲಾಗಿದೆ.

ಎಐಟಿಯುಸಿ ಬೆಂಬಲವಿಲ್ಲ
ಕೇಂದ್ರ ಸರಕಾರದ ಮೋಟಾರು ವಾಹನ ತಿದ್ದುಪಡಿ ಮಸೂದೆ-2017ಅನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಇಂದು (ಆ.7) ಸಾರಿಗೆ ಕಾರ್ಮಿಕರು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೆಎಸ್ಸಾರ್ಟಿಸಿ ಸಿಬ್ಬಂದಿ ಹಾಗೂ ನೌಕರರ ಫೇಡರೇಷನ್(ಎಐಟಿಯುಸಿ) ಬೆಂಬಲ ಸೂಚಿಸಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಕಾಯ್ದೆ ತಿದ್ದುಪಡಿಗೆ ಸ್ವಾಗತ, ಬಂದ್‌ಗೆ ನಮ್ಮ ಬೆಂಬಲವಿಲ್ಲ
ಕೇಂದ್ರ ಸರಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯನ್ನು ಬೆಂಗಳೂರು ಪ್ರವಾಸಿ ವಾಹನ ಮಾಲಕರ ಸಂಘ ಸ್ವಾಗತಿಸುತ್ತಿದೆ. ಪರವಾನಿಗೆ ಸಹಿತ ವಿವಿಧ ಕೇಂದ್ರೀಕೃತ ವ್ಯವಸ್ಥೆಗಳಿಂದ ಖಾಸಗಿ ವಾಹನ ಮಾಲಕರಿಗೆ ಅನುಕೂಲವಾಗಲಿದೆ. ಮಾತ್ರವಲ್ಲ ಇದರಿಂದ ರಾಜ್ಯಗಳ ನಡುವಿನ ಸಂಚಾರ ಸಮಸ್ಯೆಗಳೂ ನಿವಾರಣೆ ಆಗಲಿವೆ. ಹೀಗಾಗಿ ಈ ತಿದ್ದುಪಡಿಯನ್ನು ನಾವು ಸ್ವಾಗತಿಸುತ್ತಿದ್ದೇವೆ. ಅಲ್ಲದೆ ಇದನ್ನು ವಿರೋಧಿಸಿ ನಡೆಯಲಿರುವ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿಲ್ಲ. ನಮ್ಮ ಎಲ್ಲ ವಾಣಿಜ್ಯ ವಾಹನಗಳು ಎಂದಿನಂತೆ ಸಂಚರಿಸಲಿವೆ.
-ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ

‘ಸಾರಿಗೆ ಸಂಸ್ಥೆಗಳು, ಆಟೋ, ಟ್ಯಾಕ್ಸಿ ಚಾಲಕರು ಮತ್ತು ಮಾಲಕರಿಗೆ ಮರಣ ಶಾಸನವೇ ಆಗಿರುವ ಕೇಂದ್ರ ಸರಕಾರದ ಮೋಟಾರ್ ವಾಹನ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಸಾರಿಗೆ ಕಾರ್ಮಿಕರು ಕರೆ ನೀಡುವ ಮುಷ್ಕರಕ್ಕೆ ನಮ್ಮ ಬೆಂಬಲವಿದ್ದು, ನಾಳಿನ ಮುಷ್ಕರ ಅತ್ಯಂತ ಶಾಂತಿಯುತವಾಗಿ ನಡೆಯಲಿದೆ’

-ತನ್ವೀರ್, ಓಲಾ-ಉಬರ್ ಚಾಲಕ ಸಂಘದ ಅಧ್ಯಕ್ಷ

‘ಕೆಲ ಸಂಘಟನೆಗಳು ಕರೆ ನೀಡಿರುವ ಮುಷ್ಕರದಲ್ಲಿ ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಭಾಗವಹಿಸುತ್ತಿಲ್ಲ. ಆ.9ರಿಂದ ಸೆಪ್ಟಂಬರ್ 18ರ ವರೆಗರೆ 40 ದಿನಗಳ ಕಾಲ ‘ಕಾರ್ಮಿಕರನ್ನು ರಕ್ಷಿಸಿ, ದೇಶವನ್ನು ರಕ್ಷಿಸಿ, ಮೋದಿ ಸರಕಾರವನ್ನು ತೊಲಗಿಸಿ’ ಎನ್ನುವ ಘೋಷಣೆಯೊಂದಿಗೆ ಎಐಟಿಯುಸಿ ಹೋರಾಟಕ್ಕೆ ಕರೆ ನೀಡಿದೆ. ಕೆಲ ಕಿಡಿಗೇಡಿಗಳು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುತ್ತಿರುವುದು ಖಂಡನೀಯ’
-ಬಿ.ನಾರಾಯಣರೆಡ್ಡಿ, ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News