ಸ್ವಾಮಿ ವಿವೇಕಾನಂದರ ಸಾವು ಸಹಜವಲ್ಲ, ಕೊಲೆ: ಪ್ರೊ.ಕೆ.ಎಸ್.ಭಗವಾನ್

Update: 2018-08-06 15:05 GMT

ಮೈಸೂರು,ಆ.6: ಸ್ವಾಮಿ ವಿವೇಕಾನಂದರ ಸಾವು ಸಹಜವಲ್ಲ, ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಈ ಬಗ್ಗೆ ಸರ್ಕಾರ ಕೂಲಂಕಶ ತನಿಖೆ ನಡೆಸಬೇಕು ಎಂದು ಪ್ರಗತಿ ಪರ ಚಿಂತಕ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಮಹಿಷಾ ದಸರ ಪ್ರತಿಷ್ಠಾನ ಸಮಿತಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಬೌದ್ಧ ಧರ್ಮದ ವಿಚಾರ ಧಾರೆಗಳ ಕುರಿತು ಮಾತನಾಡಲಾರಂಭಿಸಿದ್ದರು. ಆ ಬಳಿಕವೇ ಅವರನ್ನು ಕೊಂದಿರುವ ಅನುಮಾನವಿದೆ. ಯುವಕರಾಗಿದ್ದ ಸ್ವಾಮಿ ವಿವೇಕಾನಂದರು ಏಕಾಏಕಿ ಸಹಜ ಸಾವನ್ನಪ್ಪಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ಆದೇ ರೀತಿ ಬಸವಣ್ಣ ಅವರನ್ನು ಕೊಲೆ ಮಾಡಲಾಗಿದೆ. ಬಸವಣ್ಣನವರ ವಚನ ಚಳವಳಿಯನ್ನು ಸಹಿಸದವರು ಅವರನ್ನು ಕೊಂದಿದ್ದಾರೆ. ಬಸವಣ್ಣನವರು ಕೂಡಲ ಸಂಗಮದ ಕಲ್ಯಾಣದಲ್ಲಿ ಐಕ್ಯರಾದರೆಂಬುದು ಶುದ್ಧ ಸುಳ್ಳು. ಜಾತಿ ವ್ಯವಸ್ಥೆ ವಿರುದ್ಧ ಚಳವಳಿ ಹುಟ್ಟು ಹಾಕಿದವರು ಬಸವಣ್ಣನವರು. ಅಂತಹ ಬಸವಣ್ಣ ಏಕೆ ಐಕ್ಯರಾಗಿ ಸಾಯುತ್ತಾರೆ ಹೇಳಿ ? ಕೈಲಾಸ, ಸ್ವರ್ಗ ಎಂಬುದು ಏನೂ ಇಲ್ಲ ಎಂದು ಭಗವಾನ್ ಪ್ರತಿಪಾದಿಸಿದರು.

ರಾಜ್ಯ ಸರ್ಕಾರದಿಂದಲೇ ಮಹಿಷಾ ದಸರಾ: ಕಳೆದ ನಾಲ್ಕು ವರ್ಷಗಳಿಂದ ಮಹಿಷಾ ದಸರಾ ಪ್ರತಿಷ್ಠಾನ ಸಮಿತಿ ಸ್ವಂತ ಖರ್ಚಿನಿಂದ ಆಚರಿಸಿಕೊಂಡು ಬಂದಿರುವ ಮಹಿಷಾ ದಸರಾವನ್ನು ನಾಡ ಹಬ್ಬ ಚಾಮುಂಡಿ ದಸರಾದಂತೆ ರಾಜ್ಯ ಸರ್ಕಾರವೇ ಆಚರಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ಅಕ್ಟೋಬರ್ 7ರಂದು ನಡೆಯುವ ಮಹಿಷಾ ದಸರಾವನ್ನು ಜಂಬೂ ಸವಾರಿ ರೀತಿ ಆನೆಯ ಮೇಲೆ ಮಹಿಷನ ಪ್ರತಿಮೆಯನ್ನು ಕೂರಿಸಿ ಮೆರವಣಿಗೆ ಮಾಡಬೇಕು. ಆ ಮೂಲಕ ಪ್ರಾಚೀನ ಪಕ್ಷಾಚರಣೆಯ ದ್ರಾವಿಡ ಸಂಸ್ಕೃತಿಯನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ಸಮಿತಿ ಅಧ್ಯಕ್ಷ ಶಾಂತರಾಜ್, ಸಾಹಿತಿಗಳಾದ ರಾಜು ಕೆ.ಬನ್ನೂರು, ಸಿದ್ದಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News