ಮೈಸೂರಿನಲ್ಲಿ ಫಿಲ್ಮ್‌ಸಿಟಿ ಸ್ಥಾಪಿಸಬೇಕು: ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

Update: 2018-08-06 15:21 GMT

ಬೆಂಗಳೂರು, ಆ. 6: ಸಿನಿಮಾ ಚಿತ್ರೀಕರಣಕ್ಕೆ ಮೈಸೂರು ಹೇಳಿ ಮಾಡಿಸಿದಂತಹ ಸ್ಥಳ. ಇಲ್ಲಿ 250ಕ್ಕೂ ಹೆಚ್ಚು ವಿಶ್ವವಿಖ್ಯಾತ ತಾಣಗಳಿವೆ. ಹೀಗಾಗಿ ಮೈಸೂರಿನಲ್ಲೆ ಚಿತ್ರನಗರಿ(ಫಿಲ್ಮ್‌ಸಿಟಿ) ಸ್ಥಾಪನೆ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ, ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.

ಮೈಸೂರು ನಗರದ ಹೊರವಲಯದ ಪಾಂಡವಪುರದ ಬಳಿ ನೂರು ಎಕರೆ ವಿಸ್ತೀರ್ಣದಲ್ಲಿ ಚಿತ್ರ ನಗರಿ ನಿರ್ಮಾಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ, ಕುಮಾರಸ್ವಾಮಿ ತನ್ನ ಬಜೆಟ್‌ನಲ್ಲಿ ಫಿಲ್ಮ್ ಸಿಟಿಯನ್ನು ರಾಮನಗರದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು.

ಮೈಸೂರಿನಲ್ಲಿ ಚಿತ್ರ ನಗರಿ ಸ್ಥಾಪನೆಯಾಗಬೇಕೆಂಬುದು ಕನ್ನಡ ಚಿತ್ರರಂಗದ ಬಹುವರ್ಷಗಳ ಕನಸು ಮತ್ತು ಬೇಡಿಕೆ. ಮೈಸೂರು ವಿಶ್ವವಿಖ್ಯಾತ ಪ್ರವಾಸಿ ತಾಣ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಸೇರಿ ಹಲವು ಭಾಷೆಗಳ ಚಿತ್ರ ನಿರ್ಮಾಪಕರು ಚಿತ್ರೀಕರಣಕ್ಕಾಗಿ ಬಹುವಾಗಿ ಇಷ್ಟಪಡುವ ನಗರ.
ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಕೃತಿಯ ಸೊಬಗು ಹಾಗೂ ಪಾರಂಪರಿಕ ಕಟ್ಟಡಗಳು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿವೆ. ಹೀಗಾಗಿಯೇ ಮೈಸೂರು ಹಾಗೂ ಸುತ್ತಮುತ್ತ ನಿತ್ಯವೂ ಒಂದಿಲ್ಲೊಂದು ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. 1945ರಿಂದಲೂ ಮೈಸೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣಗಳು ನಡೆಯುತ್ತಲೇ ಇವೆ. ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭವಾಗಿದ್ದು ನವಜ್ಯೋತಿ ಸ್ಟುಡಿಯೋ, ನೂರಾರು ಸಿನಿಮಾಗಳಿಗಾಗಿ ಅಲ್ಲಿ ಚಿತ್ರೀಕರಣ ನಡೆದಿದೆ. ಪ್ರೀಮಿಯರ್ ಸ್ಟುಡಿಯೋ ಹಲವು ಪ್ರತಿಭಾವಂತ ನಟ-ನಟಿಯರು ಹಾಗೂ ತಾಂತ್ರಿಕ ಬಳಗವನ್ನೂ ಚಿತ್ರರಂಗಕ್ಕೆ ಪರಿಚಯಿಸಿದೆ.

ಭಾರತೀಯ ಚಲನಚಿತ್ರ ರಂಗದ ದಿಗ್ಗಜರಿಗೂ ಮೈಸೂರು ಅಚ್ಚುಮೆಚ್ಚಿನ ನಗರ. 16 ಅರಮನೆಗಳು, ನದಿ, ನಾಲೆ, ಕಾಲುವೆ, ಬೆಟ್ಟ-ಗುಡ್ಡಗಳು ಸೇರಿದಂತೆ 250ಕ್ಕೂ ತಾಣಗಳು ಚಿತ್ರೀಕರಣಕ್ಕೆ ಪ್ರಶಸ್ತ್ಯವಾಗಿವೆ. ಇದೀಗ ವಿಮಾನ ನಿಲ್ದಾಣ ಸೌಲಭ್ಯವೂ ಇರುವುದರಿಂದ ಚಿತ್ರೀಕರಣಕ್ಕಾಗಿ ದೇಶ-ವಿದೇಶದಿಂದ ಬರುವವರಿಗೆ ಅನುಕೂಲ ಆಗುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಮೈಸೂರು ನಗರದಲ್ಲಿ ಚಿತ್ರಗಳು ನಿರ್ಮಾಣವಾಗಬೇಕು ಎಂದು ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರೂ ಕನಸು ಕಂಡಿದ್ದರು. ಇದನ್ನು ಮನಗಂಡು ಹಿಂದಿನ ಸರಕಾರ ಮೈಸೂರಿನಲ್ಲಿ ಚಿತ್ರ ನಗರಿ ಸ್ಥಾಪಿಸುವ ನಿರ್ಣಯವನ್ನು ಕೈಗೊಂಡು ನೂರು ಎಕರೆ ಜಮೀನು ಮಂಜೂರು ಮಾಡಿ ಜೊತೆಗೆ ಬಜೆಟ್‌ನಲ್ಲಿಯೂ ಈ ಬಗ್ಗೆ ಘೋಷಿಸಲಾಗಿತ್ತು.

ಆದರೆ, ಇದೀಗ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರಿಸಿರುವುದಾಗಿ ತಾವು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೀರಿ. ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಹಾಗೂ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News