ಜನತಾ ಪರಿವಾರ ಒಗ್ಗೂಡಿಸುವ ಕೆಲಸ ಮಾಡುತ್ತೇನೆ: ಎಚ್.ವಿಶ್ವನಾಥ್

Update: 2018-08-06 15:27 GMT

ಬೆಂಗಳೂರು, ಆ.6: ಜಾತ್ಯತೀತ ಜನತಾದಳದಿಂದ ದೂರವಾಗಿರುವ ನಾಯಕರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ಸೋಮವಾರ ನಗರದ ಜೆಪಿ ಭವನದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವಾರು ಕಾರಣಾಂತರಗಳಿಂದ ಜೆಡಿಎಸ್‌ನಿಂದ ದೂರವಾಗಿರುವ ಹಿರಿಯ ನಾಯಕರನ್ನು ಪಕ್ಷಕ್ಕೆ ಮರಳುವಂತೆ ಮನವಿ ಮಾಡಲಾಗುತ್ತದೆ. ಎಲ್ಲರನ್ನೂ ಜೊತೆಯಾಗಿಸಿಕೊಂಡು ಪಕ್ಷವನ್ನು ಮುನ್ನಡೆಸುತ್ತೇನೆ. ಆ ಮೂಲಕ ರಾಜ್ಯಾದ್ಯಂತ ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿ, ಪಕ್ಷ ಬಲಪಡಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ಯಾವ ಕುರ್ಚಿಯಲ್ಲಿ ಮಾಜಿ ಪ್ರಧಾನಿ, ಮುಖ್ಯಮಂತ್ರಿ ಕುಳಿತು ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದರೋ ಅಂತಹ ಕುರ್ಚಿಯಲ್ಲಿ ನನ್ನನ್ನು ಕೂರಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯವಾಗಿ ಜರ್ಜರಿತನಾಗಿದ್ದ ನನಗೆ ಪಕ್ಷಕ್ಕೆ ಕರೆದು, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ, ಶಾಸಕರನ್ನಾಗಿ ಮಾಡಿದ್ದಾರೆ. ಅಲ್ಲದೆ, ನನ್ನ ಮೇಲೆ ವಿಶ್ವಾಸವನ್ನಿಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ನಂಬಿಕೆಗೆ ದ್ರೋಹ ಮಾಡದಂತೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ ಮೂರು ಸಿಎಂಗಳು ಎಂದು ಬಿಜೆಪಿ ಮಾಡಿರುವ ಟ್ವೀಟ್‌ಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಮಾತನಾಡುವ ಅವಕಾಶವಿದೆ. ಆದರೆ, ಒಂದು ರಾಷ್ಟ್ರೀಯ ಪಕ್ಷವಾಗಿರುವ ಹಾಗೂ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ನಾಯಕರು ವಿವೇಚನೆಯಿಂದ ವರ್ತಿಸಬೇಕು ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News