ಕೃಷಿ ಭೂಮಿ ಆದಾಯಮಿತಿ ಹೆಚ್ಚಿಸಬಾರದು: ಮುಖ್ಯಮಂತ್ರಿಗೆ ಬಸವರಾಜ ಹೊರಟ್ಟಿ ಪತ್ರ

Update: 2018-08-06 15:40 GMT

ಬೆಂಗಳೂರು, ಆ.6: ರಾಜ್ಯ ಸರಕಾರ ಕೃಷಿ ಭೂಮಿ ಖರೀದಿಸಲು ಆದಾಯಮಿತಿ ಹೆಚ್ಚಿಸಬಾರದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ.  

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಎಂಬ ಮಹಾತ್ವಾಕಾಂಕ್ಷಿ ಕಾನೂನನ್ನು ಜಾರಿಗೆ ತಂದರು. ಇದರಿಂದ ರೈತರ ಬಾಳಿನಲ್ಲಿ ಹೊಸಬೆಳಕು ಮೂಡಿತ್ತು. ಕರ್ನಾಟಕ ಭೂ ಸುಧಾರಣೆ ಕಾನೂನು 1961 ರ ಪ್ರಕಾರ ರಾಜ್ಯದಲ್ಲಿ ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸಲು 12 ಸಾವಿರ ರೂ. ಆದಾಯಮಿತಿ ನಿಗದಿಯಾಗಿತ್ತು. 1991ರಲ್ಲಿ ಈ ಮಿತಿಯನ್ನು ರೂ 50 ಸಾವಿರಕ್ಕೆ 1995 ರಲ್ಲಿ 2 ಲಕ್ಷ ರೂ ಗೆ ಏರಿಕೆ ಮಾಡಲಾಗಿದೆ. ಆದರೆ, ಸರಕಾರ ಈ ಆದಾಯ ಮಿತಿ ದುಪ್ಪಟ್ಟು ಮಾಡಲು ಹೊರಟಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿದೆ. ಅಲ್ಲದೆ, ಕೃಷಿಕರಲ್ಲದವರು ಕೃಷಿ ಭೂಮಿಯನ್ನು ಖರೀದಿಸಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಳಸುವುದರ ಮೂಲಕ ಕೋಟ್ಯಾಧಿಪತಿಗಳಿಗೆ ಆಯಾ ಕಾಲದ ಸರಕಾರಗಳೇ ರತ್ನಗಂಬಳಿ ಹಾಸುವುದರ ಮೂಲಕ ರಾಜ್ಯದಲ್ಲಿ ಕೃಷಿ ಭೂಮಿ ಕ್ಷೀಣಿಸುವಂತೆ ಮಾಡಿವೆ.

ಇನ್ನು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಕೃಷಿ ಭೂಮಿ ಕಡಿಮೆಯಾಗುತ್ತಿದ್ದು, ರಾಜ್ಯದ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿಯ ಮೇಲೂ ಗಂಭೀರ ಪರಿಣಾಮ ಬೀರಲಿವೆ. ಆದಾಯ ಮಿತಿ ರದ್ದುಗೊಳಿಸಿದರೆ ಕೃಷಿಗೆ ಎಲ್ಲರನ್ನೂ ಆಕರ್ಷಿಸಬಹುದೆಂಬುದು ತಪ್ಪು ಕಲ್ಪನೆ. ಅಲ್ಲದೆ, ಕೃಷಿ ಎಂದರೆ ಏನೆಂಬುದರ ಬಗ್ಗೆ ಏನೂ ಗೊತ್ತಿಲ್ಲದವರು ಕೃಷಿ ಭೂಮಿಯ ಮಾಲಕರಾಗುವುದನ್ನು ತಪ್ಪಿಸುವ ಗುರುತರ ಜವಾಬ್ದಾರಿ ಸರಕಾರದ ಮೇಲೆ ಇದೆ. ಕ್ಷಣಿಕ ಆಸೆ ಹಾಗೂ ತುರ್ತು ಅವಶ್ಯಕತೆಗಳನ್ನು ಪೂರೈಸಲು ರೈತರು ತಮ್ಮ ಬೆಲೆಬಾಳುವ ಜಮೀನುಗಳನ್ನು ಅರೆಕಾಸಿಗೆ ಮಾರಿ ಬೀದಿಗೆ ಬೀಳುವುದನ್ನು ತಪ್ಪಿಸಲು ಆದಾಯ ಮಿತಿಯನ್ನು ಹೆಚ್ಚಿಸಬಾರದೆಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News