ಹನೂರು: ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ
ಹನೂರು,ಆ.06: ದಿನ್ನಳ್ಳಿ ಗ್ರಾಮ ಪಂಚಾಯತ್ ನ ಸಾಮಾಜಿಕ ಪರಿಶೋಧನೆ ಸಭೆಯಲ್ಲಿ ಕಳೆದ ಅವಧಿಯ ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿಗಳ ವಿರುದ್ಧ ಗ್ರಾಮಸ್ಥರು ನೋಡಲ್ ಅಧಿಕಾರಿ ಬಿಇಒ ಟಿ.ಆರ್ ಸ್ವಾಮಿಗೆ ದೂರು ನೀಡಿದರು.
ಕ್ಷೇತ್ರ ವ್ಯಾಪ್ತಿಯ ದಿನ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪಂಚಾಯತ್ ಕಾರ್ಯದರ್ಶಿಯ ವಿರುದ್ಧ 'ಕಳೆದ ಅವಧಿಯಲ್ಲಿ ನಡೆದ ಬಹತೇಕ ಕಾಮಗಾರಿಗಳು ಕಮಿಷನ್‍ನನ್ನು ಪಡೆದು ಗುತ್ತಿಗೆ ಮಾದರಿಯಲ್ಲಿ ಮಾಡುತ್ತಿದ್ದಾರೆ. ನರೇಗಾ ಯೋಜನೆಯ ಮುಖ್ಯ ಉದ್ದೇಶವಾದ ಜನರು ಉದ್ಯೋಗಕ್ಕಾಗಿ ಗುಳೇ ಹೋಗುವುದನ್ನು ತಪ್ಪಿಸುವಲ್ಲಿ ವಿಫಲರಾಗಿದ್ದಾರೆ' ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದವು.
ಈಗಾಗಲೇ ಬಹುತೇಕ ಸಿಸಿರಸ್ತೆ, ಚರಂಡಿಗಳ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಸಾಮಾಜಿಕ ವ್ಯವಸ್ಥೆಯಡಿಯಲ್ಲಿ ಸೌಲಭ್ಯ ಪಡೆಯುತ್ತಿರುವ ಅರಣ್ಯ ಇಲಾಖೆ ವಾಚರ್ ಶಾಲಾ ಅಡುಗೆ ಸಹಾಯಕಿಯರಿಗೂ ಸಹ ಈ ಯೋಜನೆಯ ಮುಖಾಂತರ ವೇತನ ಪಾವತಿಯಾಗಿದೆ ಎಂದು ನೋಡಲ್ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದರು ಮತ್ತು ಮಾರಳ್ಳಿ ಗ್ರಾಮದ ಪ್ರೌಡಶಾಲೆಗೆ ಸಮರ್ಪಕ ರೀತಿಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಕಾಮಗಾರಿ ಪರಿಶೀಲಿಸಿದ ನೋಡಲ್ ಅಧಿಕಾರಿ: ಈ ಸಭೆಯಲ್ಲಿ ಗ್ರಾಮಸ್ಥರಿಂದ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ವಿರುದ್ಧ ಹಲವಾರು ದೂರುಗಳು ಕೇಳಿ ಬಂದ ಕಾರಣ ಬಿಇಒ ಟಿಆರ್ ಸ್ವಾಮಿ ಕಾಮಗಾರಿ ನಡೆದಂತಹ ಸ್ಥಳಗಳಿಗೆ ಗ್ರಾಮಸ್ಥರು ಮತ್ತು ತಾಲೂಕು ಸಂಯೋಜಕರ ತಂಡದೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.
ನಂತರ ಮಾದ್ಯಮದವರ ಜೊತೆ ಮಾತನಾಡಿ, ನರೇಗಾ ಯೋಜನೆಯ ಕಳೆದ ಅವಧಿಯಲ್ಲಿ ನಡೆದ ಕಾಮಗಾರಿಗಳ ಒಟ್ಟು 53 ಕಡತಗಳಲ್ಲಿ 48 ಕಡತಗಳು ಒದಗಿಸಿದ್ದು, ಇನ್ನೂ ಸಹ 5 ಕಡತಗಳು ಮತ್ತು ಸಹಿಗಳನ್ನು ಸಹ ಒದಗಿಸಿಲ್ಲ. ಹಲವಾರು ಕಡತಗಳಲ್ಲಿ ರುಜುಗಳ ಸ್ಪಷ್ಟೀಕರಣ ಕೂಡ ಇಲ್ಲ. ನರೇಗಾ ಯೋಜನೆಯ ಕಳೆದ ಅವಧಿಯಲ್ಲಿ ಒಟ್ಟು 37ಲಕ್ಷ ಖರ್ಚುಗಳಾಗಿದೆ. ಆದರೆ ಸಭೆಯಲ್ಲಿ ಈಗಾಗಲೇ 31 ಲಕ್ಷ ರೂ ಗಳನ್ನು ಆಕ್ಷೇಪಣೆಗೆ ಸಲ್ಲಿಸಲಾಗಿದ್ದು, ಈ ಪಂಚಾಯತ್ ನ ಸಾಮಾಜಿಕ ಪರಿಶೋಧನೆಯಲ್ಲಿ ಹಲವಾರು ವ್ಯತ್ಯಾಸಗಳು ಕಂಡು ಬಂದ ಕಾರಣ ಪುನರ್ ಪರಿಶೀಲನೆ ಮಾಡುವಂತೆ ಕೋರಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.