×
Ad

ಏಷ್ಯನ್ ಗೇಮ್ಸ್‌: ಭಾರತ ಅಮೆಚೂರ್ ಕಬಡ್ಡಿ ತಂಡದ ಮ್ಯಾನೇಜರ್ ಹುದ್ದೆಗೆ ಕರ್ನಾಟಕದ ಎಂ.ಶ್ರೀಕಾಂತ್ ನೇಮಕ

Update: 2018-08-06 23:17 IST

ಶಿವಮೊಗ್ಗ, ಆ. 6: ಪ್ರತಿಷ್ಠಿತ ಏಷಿಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತ ಅಮೆಚೂರ್ ಕಬಡ್ಡಿ ಪುರುಷರ 18ರ ವಯೋಮಾನದೊಳಗಿನ ತಂಡದ ಮ್ಯಾನೇಜರ್ ಆಗಿ ರಾಜ್ಯದ ಮೂಲತಃ ಶಿವಮೊಗ್ಗದ ಎಂ.ಶ್ರೀಕಾಂತ್ ಅವರನ್ನು ನೇಮಿಸಿ ಅಮೆಚೂರ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷೆ ಡಾ. ಮ್ರಿದುಲಾ ಬಹದ್ದೂರಿಯಾ ಆದೇಶ ಹೊರಡಿಸಿದ್ದಾರೆ.

ಎಂ.ಶ್ರೀಕಾಂತ್ ಅವರು ಪ್ರಸ್ತುತ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್’ ರಾಜ್ಯಾಧ್ಯಕ್ಷರಾಗಿದ್ದು, ರಾಜ್ಯ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪಂದ್ಯಾವಳಿ: ಮಲೇಷ್ಯಾ ರಾಜಧಾನಿ ಜರ್ಕಾತದಲ್ಲಿ ಈ ಬಾರಿಯ ಏಷಿಯನ್ಸ್ ಗೇಮ್ಸ್ ಪಂದ್ಯಾವಳಿ ಆಯೋಜಿತವಾಗಿದೆ. ಕಬಡ್ಡಿಯ 18 ರ ವಯೋಮಾನ ವಿಭಾಗದಡಿ ಭಾರತದಿಂದ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸುತ್ತಿವೆ. ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ಈ ಪಂದ್ಯಾವಳಿಗಳು ನಡೆಯಲಿವೆ. ಈಗಾಗಲೇ ಎರಡೂ ವಿಭಾಗಗಳಿಗೂ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಉಷಾರಾಣಿ ನರಸಿಂಹಯ್ಯ ಅವರಿಗೆ ಸ್ಥಾನ ಸಿಕ್ಕಿದೆ. ರಾಜ್ಯದ ಶಿವಣ್ಣ ಎಂಬವರು ರೆಫ್ರಿಯಾಗಿ ಆಯ್ಕೆಯಾಗಿದ್ದಾರೆ.

ದಶಕಗಳ ನಂತರ ಪ್ರಾತಿನಿಧ್ಯ: ಈ ಮೊದಲು ರಾಜ್ಯಕ್ಕೆ ಸೇರಿದ ಸೀತಾರಾಂ ಎಂಬುವರು ಭಾರತ ಕಬಡ್ಡಿ ತಂಡದ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದರು. ಇದಾದ ನಂತರ ರಾಜ್ಯದ ಯಾರಿಗೂ ರಾಷ್ಟ್ರೀಯ ಕಬಡ್ಡಿ ತಂಡದ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾಗುವ ಯೋಗ ಒಲಿದು ಬಂದಿರಲಿಲ್ಲ. ಸುಮಾರು ಎರಡು ದಶಕಗಳ ನಂತರ ರಾಷ್ಟ್ರೀಯ ಕಬಡ್ಡಿ ತಂಡದ ಮ್ಯಾನೇಜರ್ ಹುದ್ದೆಯೂ ಕರ್ನಾಟಕ ರಾಜ್ಯಕ್ಕೆ ಒಲಿದು ಬಂದಿರುವುದು, ರಾಜ್ಯ ಕಬಡ್ಡಿ ವಲಯದಲ್ಲಿ ಸಂತಸ ಉಂಟು ಮಾಡಿದೆ. ಶ್ರೀಕಾಂತ್ ಪ್ರಸ್ತುತ ಶಿವಮೊಗ್ಗದವರಗಿದ್ದು, ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಯಾರೊಬ್ಬರು ರಾಷ್ಟ್ರೀಯ ಕ್ರೀಡಾ ತಂಡವೊಂದರ ಮ್ಯಾನೇಜರ್ ಹುದ್ದೆಯ ಪಟ್ಟ ಅಲಂಕರಿಸಿಲ್ಲ. ಎಂ.ಶ್ರೀಕಾಂತ್ ಅವರೇ ಪ್ರಪ್ರಥಮ ವ್ಯಕ್ತಿಯಾಗಿದ್ದಾರೆ ಎಂದು ಸ್ಥಳೀಯ ಕ್ರೀಡಾಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಕಾಂತ್, ಪ್ರತಿಷ್ಠಿತ ಏಷಿಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತ ಅಮೆಚೂರ್ ಕಬಡ್ಡಿ ಪುರುಷರ 18 ರ ವಯೋಮಾನದೊಳಗಿನ ತಂಡದ ಮ್ಯಾನೇಜರ್ ಆಗಿ ತಮ್ಮನ್ನು ನಿಯೋಜಿಸಿರುವುದು ಅತೀವ ಸಂತಸ ಉಂಟು ಮಾಡಿದೆ. ತಮ್ಮ ಜೀವಮಾನದಲ್ಲಿಯೇ ಎಂದಿಗೂ ಮರೆಯದ ಕ್ಷಣ ತಿಳಿಸಿದ್ದಾರೆ.

ತಮ್ಮನ್ನು ಮ್ಯಾನೇಜರ್ ಹುದ್ದೆಗೆ ಆಯ್ಕೆ ಮಾಡಿದ ರಾಷ್ಟ್ರೀಯ ಹಾಗೂ ರಾಜ್ಯ ಅಮೆಚೂರು ಕಬಡ್ಡಿ ಫೆಡರೇಷನ್‌ನ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News