ದಾವಣಗೆರೆ: ಮಾಲೂರು ಶಾಲಾ ಬಾಲಕಿಯ ಹತ್ಯೆ ಖಂಡಿಸಿ ಪ್ರತಿಭಟನೆ
ದಾವಣಗೆರೆ, ಆ.6: ಇತ್ತಿಚೆಗೆ ಮಾಲೂರಿನ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಿರುವ ಪ್ರಕರಣವನ್ನು ಖಂಡಿಸಿ ಎಐಡಿಎಸ್‌ಓ, ಎಐಡಿವೈಒ, ಎಐಎಂಎಸ್‌ಎಸ್ ಜಂಟಿಯಾಗಿ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಐಎಂಎಸ್‌ಎಸ್‌ನ ಜಿಲ್ಲಾ ಸಂಘಟನಾಕಾರರಾದ ಭಾರತಿ ಮಾತನಾಡಿ, ದೇಶವ್ಯಾಪಿ ಹೆಚ್ಚುತ್ತಿರುವ ದೌರ್ಜನ್ಯ, ಪ್ರಜ್ಞಾವಂತ ಜನತೆಯ ನೆಮ್ಮದಿ ಕೆಡಿಸಿವೆ. ಯಾವ ಮನೆಯೂ ಸುರಕ್ಷಿತವಲ್ಲ ಎಂಬ ಆತಂಕ ಸಮಾಜದಲ್ಲಿ ಮಡುಗಟ್ಟುತ್ತಿದೆ. ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಪೈಶಾಚಿಕ ಕೃತ್ಯದಿಂದ ಹಿಡಿದು ಜಮ್ಮು, ಉತ್ತರ ಪ್ರದೇಶದ ಕಥುವ, ಬಿಜಾಪುರದ ಘಟನೆಗಳು ದೇಶದ ಆತ್ಮಸಾಕ್ಷಿ ಕಲಕಿವೆ. ಈ ಸಾಲಿಗೆ ಮಾಲೂರಿನ 9ನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಘಟನೆ ಅಮಾನವೀಯ ಎಂದರು.
ನಮ್ಮ ಹೆಣ್ಣು ಮಕ್ಕಳು ಬದುಕಲು ಸಹ ಸ್ವಾತಂತ್ರ್ಯವಿಲ್ಲದಂತಾಗಿದೆ. ಈ ಸಮಾಜದಲ್ಲಿ ವಿಕೃತಿ ಅಲೆಯಂತೆ ಹರಿದಾಡುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ಬಾಲಕಿಯರು ಮತ್ತು ಮಹಿಳೆಯರು. ಈ ಕೃತ್ಯ ಖಂಡಿಸಿ ಗೌರವಯುತ ಬದುಕನ್ನು ನಡೆಸಲು ನೈತಿಕ ವಾತಾವರಣ ಸೃಷ್ಟಿಸಬೇಕಿದೆ ಎಂದರು.
ಎಐಡಿಎಸ್‌ಒನ ಜಂಟಿ ಕಾರ್ಯದರ್ಶಿ ನಾಗಜ್ಯೋತಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮಧು ತೊಗಲೇರಿ, ತಿಪ್ಪೇಸ್ವಾಮಿ, ಸೌಮ್ಯ, ನಾಗಸ್ಮಿತಾ, ಮಮತ, ನೇತ್ರ, ರೇಣುಕಾ ಪ್ರಸನ್ನ, ಪ್ರವೀಣ್, ಗುರು, ಜೀವನ್,ಕಾವ್ಯ, ನಿಸಾರ್ ಅಹಮ್ಮದ್ ಇದ್ದರು.