ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಿ: ಪೆಮ್ಮಂಡ ಕೆ.ಪೊನ್ನಪ್ಪ ಕರೆ

Update: 2018-08-06 18:30 GMT

ಮಡಿಕೇರಿ, ಆ.6 : ಅನಾದಿ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ಕೊಡವ ಭಾಷಾ ಜನಾಂಗದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದು ಅತ್ಯಗತ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಅವರು ತಿಳಿಸಿದ್ದಾರೆ. 

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕಾನೂರು ಕೊಡವ ಸಮಾಜ, ಕೋತೂರು ಅಮ್ಮ ಕೊಡವ ಸಮಾಜ, ಕಾನೂರು-ಕೋತೂರು ಮಹಿಳಾ ಸಮಾಜ, ಕಾನೂರು ಪಂಚಾಯತ್ ವ್ಯಾಪ್ತಿಯ ಸಂಘ ಸಂಸ್ಥೆಯ ಸಹಯೋಗದಲ್ಲಿ ಕೋತೂರಿನ ಮನ್ನಕ್ಕಮನೆ ವಾಸು ನಾಣಮಯ್ಯ, ಮನ್ನಕ್ಕಮನೆ ಕಿರಣ್ ಅವರ ಗದ್ದೆಯಲ್ಲಿ ಸೋಮವಾರ ನಡೆದ ಬೇಲ್‍ನಮ್ಮೆ (ಕೃಷಿ ಹಬ್ಬ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕೊಡವ ಆಚಾರ ವಿಚಾರಗಳನ್ನು ಬಹಳ ಹಿಂದಿನಿಂದಲೂ ಉಳಿಸಿಕೊಂಡು ಬರಲಾಗಿದ್ದು, ಅದನ್ನು ಯುವಜನರಿಗೆ ತಿಳಿಸಬೇಕಿದೆ. ಆ ನಿಟ್ಟಿನಲ್ಲಿ ಬೇಲ್‍ನಮ್ಮೆ, ಮುಂದ್‍ನಮ್ಮೆ, ಕೋಲ್ ಮಂದ್ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹೇಳಿದರು. ಕೊಡವ ಭಾಷಿಕ ಸಂಸ್ಕೃತಿ, ಕಲೆ, ಸಾಹಿತ್ಯ ಚಟುವಟಿಕೆಗಳನ್ನು ಯುವ ಜನರಿಗೆ ಪರಿಚಯಿಸಿಕೊಂಡು ಹೋಗಬೇಕಿದೆ ಎಂದರು. 

ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಡ ಕಂದಾ ಭೀಮಯ್ಯ ಅವರು ಮಾತನಾಡಿ ಈಗಿನ ಯುವಜನರು ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ. ಇದು ಸರಿಯಲ್ಲ. ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದರು. ಜೂನ್-ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಕೃಷಿ, ಕಾಫಿ ಬೆಳೆ ಹಾನಿಯಾಗಿದೆ. ಸೂಕ್ತ ಪರಿಹಾರ ವಿತರಣೆ ಮಾಡಬೇಕು ಎಂದು ಇದೇ ಸಂದರ್ಭ ಅವರು ಮನವಿ ಮಾಡಿದರು. 

ಕಾನೂರು ಗ್ರಾ.ಪಂ. ಅಧ್ಯಕ್ಷದ ಹೆಮ್ಮಚ್ಚಿಮನೆ ಲತಾ ಗಣೇಶ್ ಅವರು ಮಾತನಾಡಿ ಹಿಂದೆ ಕೃಷಿ ಚಟುವಟಿಕೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯಂತ್ರೋಪಕರಣ ಬಂದಿದ್ದರೂ ಸಹ ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕೊಡಗಿನ ಮೂಲೆ ಮೂಲೆಗಳಲ್ಲಿ ಬೇಲ್‍ನಮ್ಮೆ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. 

ಕೋತೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷರಾದ ಮನ್ನಕ್ಕಮನೆ ರಾಜು ಅಯ್ಯಪ್ಪಮಯ್ಯ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ನಾಟಿ ಮಾಡುವುದರ ಜೊತೆಗೆ ಜೀವನ ಪದ್ಧತಿ ಇದೆ ಎಂಬುದನ್ನು ಮರೆಯುವಂತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 

ಸುಳ್ಳಿಮಾಡ ಬಿ.ತಿಮ್ಮಯ್ಯ, ಮನ್ನಕ್ಕಮನೆ ನಾಣಮಯ್ಯ, ಚೆಪ್ಪುಡಿರ ಪಾರ್ವತಿ ಪೊನ್ನಪ್ಪ, ಹೆಮ್ಮಚ್ಚಿಮನೆ ಜಿ.ವಿಠಲ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಪಾಥಮಿಕ, ಪ್ರೌಢಶಾಲೆ, ಕಾಲೇಜು, ಸಾರ್ವಜನಿಕರಿಗೆ ಪೈರು ತೆಗೆಯುವ ಸ್ಪರ್ಧೆ, ಪೈರು ನೆಡುವ ಸ್ಪರ್ಧೆ, ಕೆಸರುಗದ್ದೆ ಓಟ, ಕೊಡಿನಾಡಿ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ, ನೇರ್‍ಪುಡಿ ಎಸೆಯುವ ಸ್ಪರ್ಧೆ, ಅಡಿಕೆ ಪಾಳೆ ಬಲಿಪೊ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. 

ಕೋತೂರು ಕಾವೇರಿ ಅಮ್ಮ ಕೊಡವ ಮಹಿಳಾ ಸಮಾಜದ ಮನ್ನಕ್ಕಮನೆ ಅಶ್ವಿನಿ ನಂದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಐತಿಚಂಡ ರಮೇಶ್ ಉತ್ತಪ್ಪ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಟಾಟು ಮೊನ್ನಪ್ಪ, ಸುಳ್ಳಿಮಾಡ ಭವಾನಿ ಕಾವೇರಪ್ಪ, ಮನುಮುತ್ತಪ್ಪ, ಪ್ಯಾನ್ಸಿ ಮುತ್ತಣ್ಣ, ತೋರೆರ ಮುದ್ದಯ್ಯ, ಕುಡಿಯರ ಶಾರದ, ಮನ್ನಕ್ಕಮನೆ ಬಾಲಕೃಷ್ಣ, ಅಜ್ಜಮಾಡ ಕುಶಾಲಪ್ಪ, ಬೊಳ್ಳಜ್ಜೀರ ಅಯ್ಯಪ್ಪ, ಉಮೇಶ ಕೇಚಮಯ್ಯ ಇತರರು ಇದ್ದರು. ರಿಜಿಸ್ಟ್ರ್ರರ್ ಉಮರಬ್ಬ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News