ಶಿವಮೊಗ್ಗ ಕಾರಾಗೃಹ ಸ್ಥಳ ಪರಿಶೀಲನೆಗೆ ಡಿಸಿಎಂ ಪರಮೇಶ್ವರ್ ಸೂಚನೆ

Update: 2018-08-07 14:52 GMT

ಬೆಂಗಳೂರು, ಆ.7: ಶಿವಮೊಗ್ಗ ಕಾರಾಗೃಹ ಇಲಾಖೆಯ ಸುಪರ್ದಿಯಲ್ಲಿ ಇರುವ ಜಾಗವನ್ನು ಸಾರ್ವಜನಿಕ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಆಚರಣೆಗೆ ಬಳಕೆ ಮಾಡಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಈ ಸಂಬಂಧ ಚರ್ಚೆ ನಡೆಸಿದ ಅವರು, ಶಿವಮೊಗ್ಗ ಕಾರಾಗೃಹ ಇಲಾಖೆ ಸುಪರ್ದಿಗೆ 48 ಎಕರೆ ಪ್ರದೇಶ ಒಳಗೊಂಡಿದೆ. ಇಲ್ಲಿ ಪೊಲೀಸ್ ತರಬೇತಿ ಹಾಗೂ ಪರೇಡ್ ನಡೆಯುತ್ತದೆ. ಈ ಜಾಗವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೂ ಬಿಟ್ಟು ಕೊಡಬೇಕೆಂದು ಬಹಳ ಹಿಂದಿನಿಂದಲೂ ಬೇಡಿಕೆ ಇದೆ ಎಂದರು.

ರಾಷ್ಟ್ರೀಯ ಆಚರಣೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಜಾಗವನ್ನು ಬಿಟ್ಟು ಕೊಡಬಹುದು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಜೊತೆಗೆ ಈ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪರಮೇಶ್ವರ್ ಹೇಳಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಸಾರ್ವಜನಿಕರ ಉಪಯೋಗಕ್ಕಾಗಿ ಶಿವಮೊಗ್ಗದಲ್ಲಿರುವ ಹಳೆಯ ಕಾರಾಗೃಹದ ಭೂಮಿಯನ್ನು ಅಭಿವೃದ್ಧಿಪಡಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶಿವಮೊಗ್ಗದಲ್ಲಿ ಲಕ್ಷಾಂತರ ಜನ ಸೇರಿ ಆಚರಣೆ ಮಾಡುವ ವಿಜಯದಶಮಿ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಸೂಕ್ತವಾದ ಸ್ಥಳಾವಕಾಶವಿಲ್ಲ ಎಂದರು. ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಇನ್ನಿತರ ಕಾರ್ಯಕ್ರಮ ಗಳನ್ನು ಆಚರಿಸಲು ಸೂಕ್ತವಾದ ಜಾಗವಿಲ್ಲ. ಆದುದರಿಂದ, ಶಿವಮೊಗ್ಗದಲ್ಲಿರುವ ಹಳೆಯ ಕಾರಾಗೃಹಕ್ಕೆ ಸೇರಿದ ಭೂಮಿಯಿದೆ. ಅದನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಒದಗಿಸಬೇಕು ಎಂಬ ಬೇಡಿಕೆಯೂ ಇದೆ ಎಂದು ಅವರು ಹೇಳಿದರು.

ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ, ಪೊಲೀಸ್ ಇಲಾಖೆಯ ಮೂಲಕವೇ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ತಕ್ಷಣ ಕಾಮಗಾರಿಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಅಧಿಕಾರಿಗಳು ಶಿವಮೊಗ್ಗಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ ಬಳಿಕ ಕಾಮಗಾರಿಗಳು ಆರಂಭಗೊಳ್ಳಲಿವೆ. ಸಾರ್ವಜನಿಕ ಸಭೆ, ಸಮಾರಂಭಗಳನ್ನು ಈ ಹಿಂದೆ ನೆಹರು ಕ್ರೀಡಾಂಗಣದಲ್ಲಿ ಮಾಡಲಾಗುತ್ತಿತ್ತು. ಆದರೆ, ಈಗ ಅಲ್ಲಿ ಸಿಂಥಿಟೆಕ್ ಟ್ರಾಕ್ ಮಾಡಿರುವುದರಿಂದ, ಸಮಾರಂಭಗಳು ಮಾಡುವಂತಿಲ್ಲ. ಕಾರಾಗೃಹದ ಸ್ಥಳ ಅಭಿವೃದ್ಧಿಪಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News