×
Ad

ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ: ರಮೇಶ್ ಜಾರಕಿಹೊಳಿ

Update: 2018-08-07 19:38 IST

ಹೊಸದಿಲ್ಲಿ, ಆ.7: ನಾನು ಹುಟ್ಟು ಕಾಂಗ್ರೆಸ್ಸಿಗ, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಅಗತ್ಯವಿದ್ದರೆ ಬಿಜೆಪಿಯಿಂದಲೇ 10 ಶಾಸಕರನ್ನು ಕಾಂಗ್ರೆಸ್‌ಗೆ ಕರೆ ತರುವ ಸಾಮರ್ಥ್ಯ ತನಗಿದೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಆರಂಭಿಸಿದ್ದು ಕಾಂಗ್ರೆಸ್‌ನಲ್ಲಿ. ಮುಗಿಸುವುದು ಕಾಂಗ್ರೆಸ್ ಪಕ್ಷದಲ್ಲೆ. ಬಿಜೆಪಿಗೆ ಹೋಗುವ ಮಾತೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜೊತೆ ನಾನು ಹೊಸದಿಲ್ಲಿಗೆ ಬಂದಿದ್ದೇನೆ ಎಂಬುದು ಆಧಾರ ರಹಿತವಾದದ್ದು. ಯಡಿಯೂರಪ್ಪ ಆಗಮಿಸುವ ಮುನ್ನವೆ ನಾನು ಹೊಸದಿಲ್ಲಿಯಲ್ಲಿದ್ದೆ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ, ನಮ್ಮ ಸಮುದಾಯಕ್ಕೆ ಸಂಪುಟದಲ್ಲಿ ಇನ್ನೊಂದು ಸ್ಥಾನ ನೀಡುವಂತೆ ಮನವಿ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ. ನಾನು ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಕಾಂಗ್ರೆಸ್ ನಾಶವಾಗುತ್ತದೆ ಎಂದು ಬಿಂಬಿಸಲಾಗುತ್ತಿತ್ತು. ಆದರೆ, ವಾಜಪೇಯಿ ಆಗಲಿ, ಬೇರೆ ಯಾರೇ ಬರಲಿ ಕಾಂಗ್ರೆಸ್ ದೇಶದಲ್ಲಿ ಇದ್ದೇ ಇರುತ್ತದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News