ಕರುಣಾನಿಧಿ ನಿಧನಕ್ಕೆ ದೇವೇಗೌಡ, ಕುಮಾರಸ್ವಾಮಿ ಸೇರಿ ಗಣ್ಯರ ಸಂತಾಪ

Update: 2018-08-07 14:41 GMT

ಬೆಂಗಳೂರು, ಆ.7: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ.ಎಂ.ಕರುಣಾನಿಧಿ(94) ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಚ್.ಡಿ.ದೇವೇಗೌಡ: ಕರುಣಾನಿಧಿ ನಿಧನದ ಸುದ್ದಿ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಇಡೀ ದೇಶವು ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ನಾನು ಕರುಣಾನಿಧಿ ಅವರನ್ನು ಸುಮಾರು 5 ದಶಕಗಳಿಂದ ಬಹಳ ಹತ್ತಿರದಿಂದ ಬಲ್ಲೆ, ಈ ದಿನ ನಾನು ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಿದ್ದೇನೆ. ನಾನು ಪ್ರಧಾನಮಂತ್ರಿ ಆಗಬೇಕಾದರೆ ಕರುಣಾನಿಧಿ ಅವರ ಪಾತ್ರ ಬಹಳ ದೊಡ್ಡದು. ಇಂದು ಇಡೀ ದೇಶಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವೇಗೌಡ ಪ್ರಾರ್ಥಿಸಿದ್ದಾರೆ.

ಸಿಎಂ ಕುಮಾರಸ್ವಾಮಿ: ‘ಬದುಕಿರುವಾಗಲೇ ದಂತಕಥೆಯಂತಿದ್ದ’ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ, ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದರು. ಪ್ರಾದೇಶಿಕ ಪಕ್ಷವನ್ನು ಸದೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟಪೂರ್ಣ. ಹಲವು ಬಾರಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಪ್ರತಿ ಬಾರಿಯೂ ನನಗೆ ಮನವರಿಕೆ ಮಾಡಿಕೊಡುತ್ತಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿದ್ದಾರೆ.

ಹಿಂದುಳಿದ ವರ್ಗ ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಅವರು ತೆಗೆದುಕೊಂಡ ಜನಪ್ರಿಯ ಯೋಜನೆಗಳನ್ನು ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಅನುಕರಿಸಲಾಗುತ್ತಿದೆ. ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದು ತಮಿಳುನಾಡಿನ ಶೋಷಿತ ವರ್ಗಕ್ಕೆ ಗಟ್ಟಿದನಿ ನೀಡಿದ ಕರುಣಾನಿಧಿಯವರ ರಾಜಕೀಯ ಸಿದ್ಧಾಂತ ನಮ್ಮೆಲ್ಲರಿಗೂ ಮಾದರಿ ಎಂದು ಅವರು ಹೇಳಿದ್ದಾರೆ.

ಕರುಣಾನಿಧಿ ನಿಧನದಿಂದ ಭಾರತದ ರಾಜಕೀಯ ರಂಗದಲ್ಲಿ ವೈಶಿಷ್ಟಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ. ತಮಿಳುನಾಡು ಒಬ್ಬ ದಾರ್ಶನಿಕ ನಾಯಕನನ್ನು ಕಳೆದುಕೊಂಡಿದೆ ಎಂದು ಕುಮಾರಸ್ವಾಮಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪ: ಕರುಣಾನಿಧಿ ಚಿಕ್ಕ ವಯಸ್ಸಿನಲ್ಲೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದ್ದು ಮಹತ್ವದ ಸಾಧನೆಯಾಗಿದೆ. ಅವರಲ್ಲಿ ನಾಯಕತ್ವದ ಗುಣ ಮೇಳೈಸಿದ್ದರಿಂದಲೇ ತಮಿಳುನಾಡಿನ ಜನಮಾನಸದಲ್ಲಿ ಅವರು ಸದಾ ನೆಲೆಸಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗಲೇ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ಚೆನ್ನೈನಲ್ಲಿ ಶ್ರೀ ಸರ್ವಜ್ಞ ಪ್ರತಿಮೆಯನ್ನು ಸ್ಥಾಪಿಸಲು ನೀಡಿದ ಸಹಕಾರವನ್ನು ಎಂದಿಗೂ ಮರೆಯಲಾಗದು. ರಾಜ್ಯದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಉಭಯ ರಾಜ್ಯಗಳ ನಡುವೆ ಬಾಂಧವ್ಯ ವೃದ್ಧಿಸುವ ನಮ್ಮ ಪ್ರಸ್ತಾವನೆಗೆ ಕರುಣಾನಿಧಿ ಸ್ಪಂದಿಸಿದ ರೀತಿಯು ಪ್ರಶಂಸಾರ್ಹ ಎಂದು ಅವರು ಸ್ಮರಿಸಿದ್ದಾರೆ.

ತಮಿಳುನಾಡಿನ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದು, ಅವರ ಸೇವೆಯನ್ನು ಅಲ್ಲಿನ ಜನತೆ ಸದಾ ಸ್ಮರಿಸುತ್ತದೆ. ಜಯಲಲಿತಾ ನಿಧನದ ನಂತರ ಇದೀಗ ಕರುಣಾನಿಧಿ ಇಲ್ಲವಾಗಿರುವುದು ತಮಿಳುನಾಡಿನ ರಾಜಕೀಯದಲ್ಲಿ ಶೂನ್ಯ ಆವರಿಸುವಂತಾಗಿದೆ. ತಮ್ಮ ಆರಾಧ್ಯ ದೈವವನ್ನು ಕಳೆದುಕೊಂಡಿರುವ ತಮಿಳುನಾಡಿನ ಜನರಿಗೆ ಉಂಟಾಗಿರುವ ವೇದನೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮೃತರಿಗೆ ಎಲ್ಲರೂ ಸೇರಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಯಡಿಯೂರಪ್ಪ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News