×
Ad

ದಾವಣಗೆರೆ: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಸಿಪಿಐ ಪ್ರತಿಭಟನೆ

Update: 2018-08-07 21:52 IST

ದಾವಣಗೆರೆ,ಆ.07: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಬಹಿರಂಗ ಸಭೆ ನಡೆಸಲಾಯಿತು. 

ಈ ಸಂದರ್ಭ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ದೇಶಾದ್ಯಂತ ಆ.1ರಿಂದ 14ರ ವರೆಗೆ ಪ್ರತಿಭಟನಾ ಆಂದೋಲನ ಹಮ್ಮಿಕೊಂಡಿದ್ದು, ಜಿಲ್ಲೆಯ ತಾಲೂಕು ಮಟ್ಟದಲ್ಲಿ 10 ಅಂಶ ಒಳಗೊಂಡ ಜಾಥಾ ನಡೆಸಲಾಗುತ್ತಿದೆ ಎಂದ ಅವರು, ಕಳೆದ ನಾಲ್ಕೂವರೆ ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದುಡಿಯುವ ಜನರ ಮೇಲೆ ಗದಾಪ್ರಹಾರ ನಡೆಸಿದೆ. ಒಳ್ಳೆಯ ದಿನಗಳು ಕೇವಲ ಆಶ್ವಾಸನೆಯಾಗಿದ್ದು, ಈ ಸರ್ಕಾರದ ಅವದಿಯಲಿ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ ಉಲ್ಭಣಗೊಳ್ಳುತ್ತಿದೆ. ಬಡವರು-ಶ್ರೀಮಂತರ ಮಧ್ಯೆ ಇದ್ದಂತಹ ಕಂದಕ ಮತ್ತಷ್ಟು ಹೆಚ್ಚಾಗಿದೆ ಎಂದು ದೂರಿದರು. 

ಕಾರ್ಮಿಕರ ಹಕ್ಕುಗಳ ಮೇಲೆ ನಿರಂತರ ದಾಳಿ ನಡೆಸಲಾಗಿದೆ. ಕೇಂದ್ರ ಸರ್ಕಾರವು ಲಾಭದಲ್ಲಿರುವ ಸಾರ್ವಜನಿಕ ಉದ್ದಿಮೆ, ಶೇರುಗಳನ್ನು ಖಾಸಗಿಯವರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುವ ಮೂಲಕ ಬಂಡವಾಳ ಶಾಹಿಗಳ ಹಿತ ಕಾಯುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಸುಮಾರು 148 ರೀತಿಯ ವಿವಿಧ ಕಸುಬುಗಳಲ್ಲಿ ತೊಡಗಿರುವ ಶೇ. 93 ಕಾರ್ಮಿಕರು ಯಾವುದೇ ಸಾಮಾಜಿಕ ಭದ್ರತೆ ಇಲ್ಲದೇ ದುಡಿಯುತ್ತಿದ್ದಾರೆ ಎಂದು ಹೇಳಿದರು. 

ಶಿಕ್ಷಣ, ಆರೋಗ್ಯವು ಕಾರ್ಮಿಕರು, ಬಡವರು, ರೈತಾಪಿ ಜನರಿಗೆ ಮರೀಚಿಕೆಯಾಗಿದೆ. ನೋಟು ಅಮಾನ್ಯೀಕರಣ, ಜಿಎಸ್‍ಟಿ ಜಾರಿಗೊಳಿಸುವ ಮೂಲಕ ಜನ ಸಾಮಾನ್ಯರು ಬಳಸುವ ವಸ್ತುಗಳು ಹಾಗೂ ಆಹಾರ ಧಾನ್ಯಗಳ ಬೆಲೆಗಳು ನಿರಂತರ ಏರಿಕೆಯಾಗಲು ಕೇಂದ್ರವೇ ಕಾರಣ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಳೆ ಇಳಿಕೆಯಾಗಿದ್ದರೂ ನಮ್ಮ ದೇಶದಲ್ಲಿ ತೈಲ ಬೆಲೆ ಇಳಿಸುತ್ತಿಲ್ಲ. ಇದೆಲ್ಲಾ ಗೊತ್ತಿದ್ದರೂ ಮೋದಿ ಮಾತ್ರ ಒಳ್ಳೆಯ ದಿನ ಬರಲಿವೆ ಎಂಬುದಾಗಿ ಹೇಳಿ, ನುಣುಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. 

ಸರ್ಕಾರಿ ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಬೇಕು. ಭೂಮಿ ಇಲ್ಲದವರಿಗೆ ಕೃಷಿ ಭೂಮಿ ಒದಗಿಸಬೇಕು. ಶುದ್ಧ ನೀರು, ಸಮಗ್ರ ನೀರಾವರಿ ವ್ಯವಸ್ಥೆ ಜಾರಿಗೊಳಿಸಬೇಕು. ವಸತಿಹೀನರಿಗೆ ಆಶ್ರಯ ಮನೆ ನೀಡಬೇಕು. ನಿರುದ್ಯೋಗ ನಿವಾರಣೆಗೆ ಜವಳಿ ಪಾರ್ಕ್ ಸೇರಿದಂತೆ ಕೈಗಾರಿಕೆ ಸ್ಥಾಪಿಸಬೇಕು. ಬಗರ್‍ಹುಕುಂ ಸಾಗುವಳಿದಾರರು, 25 ವರ್ಷಕ್ಕೂ ಮೇಲ್ಪಟ್ಟು ವಾಸಿಸುವ ನಿವಾಸಿಗಳಿಗೆ ಭೂಮಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದ ಅವರು, ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸಬೇಕು. 60 ವರ್ಷ ಮೇಲ್ಪಟ್ಟ ವೃದ್ಧರಿಗೆ 3 ಸಾವಿರ ರೂ. ಪಿಂಚಣಿ ನೀಡಬೇಕು. ಪರಿಶಿಷ್ಟರ ಕಾಲನಿಗಳ ಅಭಿವೃದ್ಧಿಗೆ 1 ಕೋಟಿ ಮೀಸಲಿಡಬೇಕು. ಉದ್ಯೋಗ ಖಾತರಿ ಕೂಲಿಯನ್ನು 500 ರು.ಗೆ ಹೆಚ್ಚಿಸಿ, ವರ್ಷದ 265 ದಿನವೂ ಕೆಲಸ ನೀಡಬೇಕು, ಮುಂತಾದ ಬೇಡಿಕೆ ಮುಂದಿಟ್ಟುಕೊಂಡು ಸ್ಥಳೀಯವಾಗಿ ಹೋರಾಟ ನಡೆಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಖಜಾಂಚಿ ಆನಂದರಾಜ, ಪಾಲಿಕೆ ಸದಸ್ಯ ಆವರಗೆರೆ ಎಚ್.ಜಿ.ಉಮೇಶ, ಆವರಗೆರೆ ಚಂದ್ರು, ಆವರಗೆರೆ ವಾಸು, ಟಿ.ಎಸ್.ನಾಗರಾಜ, ಪಿ,ಷಣ್ಮುಖಸ್ವಾಮಿ, ಮಹಬೂಬ್ ಬಾಷಾ, ರೇಣುಕಮ್ಮ, ಕೆ.ಶ್ರೀನಿವಾಸಮೂರ್ತಿ, ಇ.ಶ್ರೀನಿವಾಸ, ತಿಮ್ಮಣ್ಣ, ಎಚ್.ಅಣ್ಣಪ್ಪ ಸ್ವಾಮಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News