ಅಭಿವೃದ್ದಿ ಕಾರ್ಯದಲ್ಲಿ ಪಕ್ಷಭೇದ ಮರೆತು ಕೈ ಜೊಡಿಸಬೇಕು: ಶಾಸಕ ಡಿ.ಎಸ್.ಸುರೇಶ್

Update: 2018-08-07 17:02 GMT

ಲಿಂಗದಹಳ್ಳಿ, ಆ.7: ಅಭಿವೃದ್ದಿ ಕಾರ್ಯದಲ್ಲಿ ಪಕ್ಷಭೇದ ಮರೆತು ಎಲ್ಲರೂ ಕೈ ಜೊಡಿಸಿದರೆ ಪ್ರಗತಿ ಸಾಧಿಸಬಹುದು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. 

ಲಿಂಗದಹಳ್ಳಿ ಗ್ರಾಮ ಪಂ. ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಭಾರಿ ಶಾಸಕರಾಗಿದ್ದಾಗ ಲಿಂಗದಹಳ್ಳಿ ಹೋಬಳಿಗೆ ಹೆಚ್ಚು ಅನುದಾನ ತಂದು ಅಭಿವೃದ್ದಿ ಕಾರ್ಯ ನಡೆಸಲಾಗಿತ್ತು. ಈ ಭಾರಿಯು ಸಹ ಹೆಚ್ಚಿನ ಶ್ರಮವಹಿಸಿ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು ಎಂದರು. 

ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬಂದಿದ್ದರೆ ಅತಿ ಹೆಚ್ಚು ಅನುದಾನ ತಂದು ತರೀಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ನಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿರುವುದರಿಂದ ಅನುದಾನ ತರುವಲ್ಲಿ ಕಾಲಾವಕಾಶ ಬೇಕಾಗುವುದು ಎಂದರು. 

ತರೀಕೆರೆ ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲಿ ಬಾಕಿ ಇರುವ ಅಭಿವೃದ್ದಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಕೈಗೊಳ್ಳಲಾಗುವುದು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ, ಚುನಾವಣೆ ನಂತರ ಎಲ್ಲಾ ಜನ ಪ್ರತಿನಿಧಿಗಳು ಪಕ್ಷಭೇದ ಮರೆತು ಅಧಿಕಾರಿಗಳ ಸಹಕಾರದಲ್ಲಿ ಅಭಿವೃದ್ದಿ ಕಾರ್ಯಗಳತ್ತ ಗಮನಹರಿಸಬೇಕಾಗಿದೆ ಎಂದು ಹೇಳಿದರು. 

ಜಿಲ್ಲಾ ಪಂ. ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಡಿ.ಎಸ್. ಸುರೇಶ್‍ರವರು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ 550 ಕೋಟಿಗೂ ಹೆಚ್ಚು ಅನುದಾನ ತಂದು ತಾಲೂಕಿನಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಸಿಮೆಂಟ್ ರಸ್ತೆ ಮಾಡುವುದರ ಜೊತೆಗೆ ಹೆಚ್ಚು ಅಭಿವೃದ್ದಿ ಕಾಮಗಾರಿ ನಡೆಸಿದ್ದಾರೆ. ಈಗಲೂ ಕ್ಷೇತ್ರಕ್ಕೆ ಹೆಚ್ಚು ಅನುದಾನ ತಂದು ಮೂಲಭೂತ ಸೌಕರ್ಯ ಒದಗಿಸಲು ಪ್ರಯತ್ನಿಸಲಿದ್ದಾರೆ ಎಂದರು. 

ಗ್ರಾ.ಪಂ. ಅಧ್ಯಕ್ಷ ಎಲ್.ಎನ್.ಲಿಂಗರಾಜು ಮಾತನಾಡಿ, ಕಳೆದ ಕೆಲವು ವರ್ಷಗಳ ಬರಗಾಲದಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಲಿಂಗದಹಳ್ಳಿ ಗ್ರಾಮ ದೊಡ್ಡದಾಗಿ ಬೆಳೆದಿದ್ದು ಜನಸಂಖ್ಯೆ ಜಾನುವಾರುಗಳ ಸಂಖ್ಯೆ ಹೆಚ್ಚಿದೆ. ಹಳೆ ಪೈಪ್‍ಲೈನ್‍ನಲ್ಲಿ ನೀರು ಒದಗಿಸಲು  ಸಾಧ್ಯವಾಗುತ್ತಿಲ್ಲ ಆದ್ದರಿಂದ ಶಾಸಕರು ಹೊಸ ಪೈಪ್‍ಲೈನ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಜೊತೆಗೆ ಕುಡಿಯುವ ನೀರಿನ ಟ್ಯಾಂಕರ್ ನಿರ್ಮಾಣ ಹಾಗೂ ಈ ಭಾಗದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭ ಶಾಸಕ ಡಿ.ಎಸ್.ಸುರೇಶ್, ಜಿ.ಪಂ. ಉಪಾಧ್ಯಕ್ಷ ಕೆ.ಆರ್. ಆನಂದಪ್ಪ, ಅವರನ್ನು ಪಂ. ಆಡಳಿತ ವತಿಯಿಂದ ಸನ್ಮಾನಿಸಲಾಯಿತು. ಟಿ.ಎ.ಪಿ.ಸಿ. ಎಂ.ಎಸ್. ಅಧ್ಯಕ್ಷ ಗುಳ್ಳದಮನೆ ವಸಂತ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ಭದ್ರಚಾರ್, ಗ್ರಾ.ಪಂಚಾಯಿತಿ ಸದಸ್ಯರು ಬಿ.ಜೆ.ಪಿ. ಮುಖಂಡರುಗಳು ಹಾಗೂ ಗ್ರಾ.ಪಂ. ಸಿಬ್ಬಂಧಿ ಇದ್ದರು.

'ಲಿಂಗದಹಳ್ಳಿ ಗ್ರಾಮ ಪಂ.ನ ಬೀದಿದೀಪ, ಕುಡಿಯುವ ನೀರು ಹಾಗೂ ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಶ್ಲಾಘನೀಯ, ಶಾಸಕರ ಜಿಲ್ಲಾ ಪಂ. ಹಾಗೂ ಗ್ರಾಮ ಪಂ. ಒಂದಾಗಿ ಅನುದಾನ ಒದಗಿಸುವ ಮೂಲಕ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು." 
-ಶಾಸಕ ಡಿ.ಎಸ್.ಸುರೇಶ್.

'ಲಿಂಗದಹಳ್ಳಿ ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು,  ಪ್ರತಿದಿನ ಕಸ ವಿಲೇವಾರಿಗೆ ವಾಹನ ಒಂದನ್ನು ಖರೀದಿಸಲಾಗಿದೆ.  ಇದು ಸಾಕಾಗದಿರುವುದರಿಂದ ಇನ್ನೊಂದು ಕಸ ವಿಲೇವಾರಿ ವಾಹನವನ್ನು ಗ್ರಾ.ಪಂಗೆ ಒದಗಿಸಲು ಶಾಸಕರಲ್ಲಿ ಮನವಿ ಮಾಡುತ್ತೇನೆ."
-ಗ್ರಾ.ಪಂ. ಅಧ್ಯಕ್ಷ ಲಿಂಗರಾಜು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News