ವಿದ್ಯಾರ್ಥಿ ಜೀವನ ಸಾಧನೆಯ ಪ್ರಮುಖ ಘಟ್ಟ: ಶಾಸಕ ರಾಜೇಗೌಡ

Update: 2018-08-07 17:05 GMT

ಚಿಕ್ಕಮಗಳೂರು, ಆ.7: ಯುವ ಜನತೆ ವಿದ್ಯಾರ್ಥಿ ದೆಸೆಯಲ್ಲಿ ಓದಿಗೆ ಮಾತ್ರ ಮಹತ್ವ ನೀಡಬೇಕು, ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾಗಬೇಕು ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಸಲಹೆ ನೀಡಿದ್ದಾರೆ.

ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಎಂಇಎಸ್ ವಿದ್ಯಾ ಸಂಸ್ಥೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ. ಅವುಗಳ ಹಿಂದೆ ಹೋದರೆ ವಿದ್ಯಾಭ್ಯಾಸ ಕುಂಠಿತವಾಗಿ ಬದುಕು ಹಾದಿ ತಪ್ಪುತ್ತದೆ. ವಿದ್ಯಾರ್ಥಿಗಳು ಇದನ್ನು ಅರಿತು ಓದಿಗೆ ಮಾತ್ರ ಪ್ರಾಮುಖ್ಯ ನೀಡಬೇಕು. ರಾಜ್ಯದ 93 ಖಾಸಗಿ ಪದವಿ ಕಾಲೇಜುಗಳು ಅನುದಾನರಹಿತವಾಗಿವೆ. ಬಹಳಷ್ಟು ಕಾಲೇಜುಗಳು ನಷ್ಟದಲ್ಲಿ ನಡೆಯುತ್ತಿವೆ. ಇದರ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಕಾಲೇಜಿನ ನಿರ್ದೇಶಕರೋರ್ವರು ಶಾಸಕರಾಗಿ ಆಯ್ಕೆಯಾಗಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಂಇಎಸ್ ಪದವಿ ಕಾಲೇಜಿಗೆ ಸರಕಾರದ ಅನುದಾನ ದೊರಕಿಸಿ ಕೊಡುವುದರ ಜೊತೆಗೆ ಕೆ.ಆರ್.ಪೇಟೆಯ ಶಾಲೆಯ ಭೂಮಿಯನ್ನು ಸಂಸ್ಥೆಯ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು.

ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವಿಜಯಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷೆ ರಾಧಾ ಸುಂದರೇಶ್, ಖಜಾಂಚಿ ನಟರಾಜ್, ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ಕಾರ್ಯಕಾರಿ ಮಂಡಳಿ ಸದಸ್ಯೆ ಜಯಶ್ರೀ ಜೋಷಿ, ಆಡಳಿತಾಧಿಕಾರಿ ಎಸ್.ಶಾಂತಕುಮಾರಿ, ಪ್ರಾಂಶುಪಾಲ ಡಾ. ಎಚ್.ವಿಷ್ಣುವರ್ಧನ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News