ಮೂಡಿಗೆರೆ: ಬಾಲಕಿಯ ನಿರಂತರ ಅತ್ಯಾಚಾರ; ವಿವಾಹಿತನ ಬಂಧನ

Update: 2018-08-07 17:22 GMT

ಮೂಡಿಗೆರೆ, ಆ.7: ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೇಲೆ ವಿವಾಹಿತ ವ್ಯಕ್ತಿಯೋರ್ವ ನಿರಂತರ ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ 7 ತಿಂಗಳ ಗರ್ಭಿಣಿಯಾಗಿರುವ ಘಟನೆ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಆರೋಪಿ ದಾವಣಗೆರೆಯ ಹರಪನಹಳ್ಳಿ ತಾಲೂಕಿನ ದಯಾನಾಯ್ಕ (26) ಎಂದು ತಿಳಿದು ಬಂದಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಕರಣ ಬಯಲಾ ಗುತ್ತಿದ್ದಂತೆ ಪರಾರಿಯಾಗಿದ್ದ ಈತನ್ನು ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ ಅರಸೀಕೆರೆಯವಳಾಗಿದ್ದು, ಗೋಣಿಬೀಡು ಠಾಣಾ ವ್ಯಾಪ್ತಿಯ ದೇವರಮಕ್ಕಿ ಕಾಫಿ ಎಸ್ಟೇಟ್‌ನಲ್ಲಿ ಕಾರ್ಮಿಕಳಾಗಿ ದುಡಿಯುತ್ತಿದ್ದಳು. ಅಲ್ಲದೆ, ತನ್ನ ಕುಟುಂಬದೊಂದಿಗೆ ಕೂಲಿಲೈನ್‌ನ ಅಕ್ಕಪಕ್ಕದಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.

ಬಾಲಕಿಯ ಹೆತ್ತವರು ಮನೆಯಲ್ಲಿ ಇಲ್ಲದ ವೇಳೆ ದಯಾನಾಯ್ಕ ಬಾಲಕಿಯನ್ನು ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ. ಪರಿಣಾಮ ಬಾಲಕಿ 7ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗರ್ಭವತಿಯಾದ ಬಾಲಕಿಯ ದೇಹದಲ್ಲಿ ಬದಲಾವಣೆಗಳು ಕಂಡಾಗ ಪೋಷಕರು ಬಾಲಕಿಯನ್ನು ವಿಚಾರಿಸಿದ್ದು, ಪಕ್ಕದ ಲೈನಿನ ನಿವಾಸಿ ದಯಾನಾಯ್ಕ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ಬಳಿಕ ಬಾಲಕಿಯ ಪೋಷಕರು ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News