ವ್ಯಸನಮುಕ್ತ ಸಮಾಜದಿಂದ ಉತ್ತಮ ದೇಶ ನಿರ್ಮಾಣ: ಅಪರ ಜಿಲ್ಲಾಧಿಕಾರಿ ವೈಶಾಲಿ

Update: 2018-08-07 17:26 GMT

ಚಿಕ್ಕಮಗಳೂರು, ಆ.7: ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ಇದರಿಂದ ಪ್ರತಿಯೊಬ್ಬರು ದೂರುವಿರುವುದು ಒಳಿತು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಪ್ರಾದೇಶಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಕರ್ನಾಟಕ ಹಾಗೂ ಜಿಲ್ಲಾ ಪೊಲೀಸ್ ಚಿಕ್ಕಮಗಳೂರು ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಇಲಾಖೆ ಸಿಬ್ಬಂದಿಗೆ ಮಾದಕ ವಸ್ತುವಿನ ನಿಯಂತ್ರಣ ಕುರಿತ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ದುಶ್ಚಟಗಳು ಸಮಾಜದಲ್ಲಿ ವ್ಯಕ್ತಿಗಿರುವ ಗೌರವವನ್ನು ಕಡಿಮೆ ಮಾಡುವುದಲ್ಲದೆ ಆರೋಗ್ಯ ಹಾಳು ಮಾಡುತ್ತದೆ. ಇಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದ ಅವರು, ಮೊದಲು ದುಶ್ಚಟಗಳು ನಮ್ಮ ಗುಲಾಮರಾಗಿದ್ದರೆ, ನಂತರದ ದಿನಗಳಲ್ಲಿ ದುಶ್ಚಟಗಳ ಗುಲಾಮರಾಗಿ ನಾವು ಇರಬೇಕಾಗುತ್ತದೆ ಎಂದರು.

ಯುವ ಜನರು ಮೋಜು ಮಸ್ತಿಯ ಸೋಗಿನಲ್ಲಿ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಆದರೆ ನಂತರದ ದಿನಗಳಲ್ಲಿ ದಾಸರಾಗುತ್ತಾರೆ, ವ್ಯಸನಿಗಳ ಮನಃ ಪರಿವರ್ತನೆಯಿಂದ ಅವರನ್ನು ವ್ಯಸನಮುಕ್ತರಾಗಿಸಬೇಕು. ವ್ಯಸನ ಮುಕ್ತ ಸಮಾಜದಿಂದ ಮಾತ್ರ ಉತ್ತಮ ದೇಶ ಕಟ್ಟಲು ಸಾಧ್ಯ. ಅದರಿಂದ ಕೆಟ್ಟ ಚಟಗಳಿಂದ ಯುವಜನರು ದೂರ ಉಳಿಯಬೇಕು ಎಂದರು. ಜನ ಸಾಮಾನ್ಯರಿಗೆ ತೊಂದರೆಯಾಗುವುದನ್ನು ತಪ್ಪಿಸುವುದು ನಮ್ಮ ಕೆಲಸ ಎಂದ ಅವರು ದುಷ್ಚಟಗಳಿಗೆ ಬಲಿಯಾದ ಯುವ ಜನರ ಪೋಷಕರಿಗೆ ಮಾಹಿತಿ ತಿಳಿಸುವುದು ಇಲಾಖೆಯ ಮುಖ್ಯ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಸರಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಗಂಗಾಧರ ವರ್ಮ ಬಿ.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಪಿಯಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಜಿನಿಯಸ್ ಸೈನ್ಸ್ ಆ್ಯಂಡ್ ರಿಸರ್ಚ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ನಿರಂಜನ್ ಹೆಗ್ಡೆ ಹೊಸಬಾಳೆ ಮತ್ತಿತರರು ಉಪಸ್ಥಿತರಿದ್ದರು. ಜಗದೀಶ.ಬಿ ಸ್ವಾಗತಿಸಿದರು. ಶೈಲಶ್ರೀ ನಿರೂಪಿಸಿದರೆ, ರವಿ ಕಾಂಬ್ಳೆ ವಂದಿಸಿದರು.

ಪೊಲೀಸ್ ಇಲಾಖೆ ಕಾನೂನು ಅನುಷ್ಠಾನಗೊಳಿಸುವುದು ಸೇರಿದಂತೆ ಸಮಾಜದಲ್ಲಿ ಬದಲಾವಣೆ ತರುವ ಕೆಲಸವನ್ನು ನಿರಂತರವಾಗಿ ಜನ ಸಾಮಾನ್ಯರ ಮಧ್ಯೆ ಇದ್ದು ಮಾಡಿಕೊಂಡು ಬರುತ್ತಿದೆ. ಯಾವುದೇ ರೋಗ ಬಂದು ಅದಕ್ಕೆ ಚಿಕಿತ್ಸೆ ಪಡೆಯುವುದರ ಬದಲಿಗೆ ರೋಗ ಬರದಂತೆ ಎಚ್ಚರ ವಹಿಸುವುದು ಮುಖ್ಯ. ಹಾಗೆಯೇ ದುಶ್ಚಟಗಳಿಗೆ ಬಲಿಯಾಗಿ ಅದರಿಂದ ಹೊರಬರಲು ಶ್ರಮಿಸುವ ಬದಲಿಗೆ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರದಿಂದಿರಬೇಕು.
-ಬಿ.ಎಂ.ಲಕ್ಷ್ಮೀಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News