ಉದ್ಯೋಗ ಮೇಳ, ಮಿಲಿಟರಿ ಫೋರ್ಸ್ ಕರೆಸಲು ಚಿಂತನೆ: ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
ಮೈಸೂರು,ಆ.7: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೆರಡು ತಿಂಗಳು ಬಾಕಿ ಇದ್ದು, ಸಿದ್ಧತೆ ಪ್ರಾರಂಭವಾಗಿದೆ. ಈ ನಡುವೆ ಈ ಬಾರಿ ದಸರಾ ಮಹೋತ್ಸವದಲ್ಲಿ ಉದ್ಯೋಗ ಮೇಳ ನಡೆಸಲು ಹಾಗೂ ಮಿಲಿಟರಿ ಫೋರ್ಸ್ ಕರೆಸಲು ಚಿಂತನೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ವಿಶ್ವವಿಖ್ಯಾತ ದಸರಾ ಮಹೋತ್ಸವ ಸಿದ್ಧತೆ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಏರ್ ಶೋ ಸಂಬಂಧ ಈಗಾಗಲೇ ಪತ್ರವ್ಯವಹಾರ ನಡೆಸಲಾಗಿದೆ. ಈ ಬಾರಿ ದಸರಾದಲ್ಲಿ ಮಿಲಿಟರಿ ಪೋರ್ಸ್ ಕರೆಸಲು ಚಿಂತನೆ ನಡೆಸಿದ್ದು, ರಾಜ್ಯಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ಉದ್ಯೋಗ ಮೇಳದಲ್ಲಿ ಹೊರ ರಾಜ್ಯದ ಹೆಚ್ಚು ಕಂಪೆನಿಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಶೀಘ್ರದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹೈ ಪವರ್ ಕಮಿಟಿ ಸಭೆ ನಡೆಯಲಿದ್ದು ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಲಾಗುತ್ತದೆ. ದಸರಾಗೆ ಇನ್ನು 2 ತಿಂಗಳು ಮಾತ್ರವೇ ಬಾಕಿ ಇದೆ. ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈಗಾಗಲೇ ದಸರಾ ಸಂಬಂಧ ಎಲ್ಲ ಇಲಾಖೆಗಳಲ್ಲಿಯೂ ಸಿದ್ಧತೆ ನಡೆಯುತ್ತಿವೆ. ಪ್ರವಾಸಿಗರನ್ನು ಸೆಳೆಯುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಆ.23,24 ಗಜಪಯಣ: ಗಜಪಯಣ 23 ಅಥವಾ 24ಕ್ಕೆ ಹಮ್ಮಿಕೊಳ್ಳುವ ಸಾಧ್ಯತೆ ಇದ್ದು, ಉನ್ನತ ಸಮಿತಿ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗುತ್ತದೆ. ಜೊತೆಗೆ ದಸರಾ ಉದ್ಘಾಟನೆ, ಬಜೆಟ್ ಬಗ್ಗೆ ಉನ್ನತ ಸಮಿತಿ ಸಭೆಯಲ್ಲಿ ತೀರ್ಮಾನವಾಗಲಿದೆ. ಈಗಾಗಲೇ ಉನ್ನತ ಸಮಿತಿ ಸಭೆಗೆ ದಿನಾಂಕ ನಿಗದಿಗೆ ಮನವಿ ಮಾಡಲಾಗಿದೆ. ಮುಂದಿನ ವಾರದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ದಸರಾ ಸಂಬಂಧ ಕಾಮಗಾರಿಗಳು ಸಕಾಲಕ್ಕೆ ಪೂರ್ಣಗೊಳ್ಳಲಿದ್ದು ಕಾಮಗಾರಿ ಸಂಬಂಧ ಮಹಾನಗರ ಪಾಲಿಕೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಿಎಂ ಸಭೆ ನಡೆಸಿದ ಬಳಿಕ ಎಲ್ಲ ಕಾರ್ಯ ಕ್ರಮಗಳನ್ನೂ ತಿಳಿಸಲಾಗುವುದು. ದಸರಾಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ರಚನೆಯು ಸಿಎಂ ನೇತೃತ್ವದಲ್ಲಿ ನಡೆಯಲಿದೆ. ಯಾವ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಈ ಬಾರಿಯ ದಸರಾದಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ ನಡೆಸುವ ಬಗ್ಗೆಯು ಚರ್ಚಿಸಲಾಗಿದೆ. ಏರ್ ಶೋ ನಡೆಸುವ ಬಗ್ಗೆ ಆರ್ಮಿ ಮತ್ತು ನೇವಿ ಜೊತೆ ಈಗಾಗಲೇ ಪತ್ರ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಆಗಸ್ಟ್ 15ರಿಂದ ರಾಜ್ಯದಲ್ಲಿ ಹಸಿರು ಕರ್ನಾಟಕ ಯೋಜನೆ ಸಂಬಂಧಿಸಿದಂತೆ ಚರ್ಚೆಯಾಗಿದೆ. ಸರಕಾರಿ ಅಧೀನದಲ್ಲಿರುವ ಸ್ಥಳಗಳಲ್ಲಿ 40 ಬಗೆಯ ಸಸ್ಯಗಳನ್ನು ನೆಡುವುದರ ಮೂಲಕ ಹಸಿರು ರಾಜ್ಯವನ್ನಾಗಿಸಲು ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.
ಆಗಸ್ಟ್ 15ರ ಸ್ವಾತಂತ್ರ್ಯ ದಿನ ಆಚರಣೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು. ಈ ಬಾರಿಯ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂದು ಮುಖ್ಯಮಂತ್ರಿ ಸಭೆ ನಡೆಸಿದ ಬಳಿಕ ನಿರ್ಧಾರವಾಗಲಿದೆ ಎಂದು ಹೇಳಿದ ಅವರು, ಮೈಸೂರು ಸ್ವಚ್ಛ ನಗರ ಎನ್ನುವ ಬಿರುದು ಇರುವ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಸ್ವಚ್ಛತೆ ಕಾಪಾಡೋದು ನಮ್ಮ ಗುರಿ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಡಿಸಿಪಿ ವಿಕ್ರಂ ಆಮ್ಟೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.