×
Ad

ಮಂಡ್ಯ: ಆ.11 ರಂದು ಭತ್ತದ ನಾಟಿಗೆ ಸಿಎಂ ಕುಮಾರಸ್ವಾಮಿ ಚಾಲನೆ

Update: 2018-08-07 23:34 IST

ಮಂಡ್ಯ,ಆ.07: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಇಂಗಿತದಂತೆ ಭತ್ತದ ನಾಟಿ ಹಾಕಲು ಆ.11 ರಂದು ಜಿಲ್ಲೆಗೆ ಆಗಮಿಸುತ್ತಿದ್ದು, ನಾಟಿ ಕಾರ್ಯಕ್ಕೆ ಸಿದ್ದತೆ ಕೈಗೊಳ್ಳಲಾಗಿದೆ.

ಆ.11 ರಂದು ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಮಹದೇವಮ್ಮ ಅವರ ಜಮೀನಿನಲ್ಲಿ ಮುಖ್ಯಮಂತ್ರಿ ಭತ್ತದ ನಾಟಿಯಲ್ಲಿ ಭಾಗಿಯಾಗಲಿದ್ದು, ಇದಕ್ಕಾಗಿ 5 ಎಕರೆ ಗದ್ದೆಯನ್ನು ಹದಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಂಟಿ ಕೃಷಿ ಅಧಿಕಾರಿ ರಾಜಸುಲೋಚನಾ ಮತ್ತಿತರ ಅಧಿಕಾರಿಗಳ ಜತೆ ಮಂಗಳವಾರ ಸೀತಾಪುರಕ್ಕೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ನಾಟಿ ಸಿದ್ದತೆ ಪರಿಶೀಲಿಸಿದರು. ಸುಮಾರು ನೂರು ಮಹಿಳೆಯರ ಜತೆ ಕುಮಾರಸ್ವಾಮಿ ಅವರು ಭತ್ತದ ನಾಟಿಯಲ್ಲಿ ಭಾಗಿಯಾಗಿ ಕೃಷಿ ಚಟುವಟಿಕೆಗೆ ಚಾಲನೆ ನೀಡುವರು. ಗದ್ದೆಯ ನಾಟಿ ಕಾರ್ಯ ಮುಗಿಯುವವರೆಗೂ ಹಾಜರಿರುವರು ಎಂದು ಪುಟ್ಟರಾಜು ತಿಳಿಸಿದರು.

ಉಪವಿಭಾಗಾಧಿಕಾರಿ ಆರ್.ಯಶೋಧ, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ,  ಕಾವೇರಿ ನೀರಾವರಿ ನಿಗಮ ಇಇ ಬಸವರಾಜೇಗೌಡ, ಕೃಷಿ ಅಧಿಕಾರಿ ಜಗದೀಶ್, ತಾಪಂ ಸದಸ್ಯ ಗೋಪಾಲೇಗೌಡ ಇತರ ಮುಖಂಡರು ಹಾಜರಿದ್ದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ಚರ್ಚೆ: ಇದಕ್ಕೂ ಮುನ್ನ ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪುಟ್ಟರಾಜು, ಮುಖ್ಯಮಂತ್ರಿಗಳು ನಾಟಿ ಕಾರ್ಯದಲ್ಲಿ ಭಾಗಿಯಾದ ನಂತರ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಕೆಆರ್‍ಎಸ್‍ನಲ್ಲಿ ಸಭೆ ನಡೆಸಲಿದ್ದಾರೆ ಎಂದರು. ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ ಸದಸ್ಯರ ಜತೆ ಸಮಾಲೋಚನೆ ಮಾಡುವ ಮುಖ್ಯಮಂತ್ರಿಗಳು, ಜಿಲ್ಲೆಯಲ್ಲಿ ಕಾರ್ಖಾನೆಗಳ ಸ್ಥಾಪನೆ ಮತ್ತು ಕೃಷಿ ಅಭಿವೃದ್ಧಿ ಕುರಿತಂತೆ ಯೋಜನೆ ರೂಪಿಸಲಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲಾಗುವುದು. ಮೈಷುಗರ್ ಕಾರ್ಖಾನೆಗೆ ಹೊಸ ಅತ್ಯಾಧುನಿಕ ಯಂತ್ರ ಅಳವಡಿಸಲಾಗುವುದು ಎಂದೂ ಅವರು ತಿಳಿಸಿದರು.

ಜಲಪಾತೋತ್ಸವ ಮುಂದೂಡಿಕೆ:
ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಆ.26 ಮತ್ತು 27ರಂದು ಹಮ್ಮಿಕೊಂಡಿದ್ದ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಸೆ.15 ಮತ್ತು 16ಕ್ಕೆ ಮುಂದೂಡಲಾಗಿದೆ ಎಂದು ಅವರು ತಿಳಿಸಿದರು.

ಪಕ್ಷ ತೀರ್ಮಾನಿಸುತ್ತದೆ:  ಜೆಡಿಎಸ್ ಕಾಂಗ್ರೆಸ್ ಮೈತ್ರಿ ಪ್ರಕಾರ ಜಿಲ್ಲೆಯ ಲೋಕಸಭೆಗೆ ಅಭ್ಯರ್ಥಿ ಆಯ್ಕೆಯಾಗಲಿದೆ. ದೇವೇಗೌಡರ ತರುವ ಯತ್ನವಿತ್ತು. ನಾನಾಗಬಹುದು, ಪ್ರಜ್ವಲ್ ರೇವಣ್ಣ ಆಗಬಹುದು. ಜಿಲ್ಲೆಯಲ್ಲೂ ಸಮರ್ಥ ಅಭ್ಯರ್ಥಿಗಳಿದ್ದಾರೆ. ಇದರ ತೀರ್ಮಾನ ಪಕ್ಷ ತೆಗೆದುಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಯುವ ಘಟಕದ ಅಧ್ಯಕ್ಷ ಅಶೋಕ್ ಜಯರಾಂ, ಎಸ್‍ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಜಯರಾಂ, ಟಿ.ತಿಮ್ಮೇಗೌಡ, ಬೇಲೂರು ಶಶಿಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News