×
Ad

ಕೊಡಗು ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಡಿಸಿ ಶ್ರೀವಿದ್ಯಾ

Update: 2018-08-07 23:42 IST

ಮಡಿಕೇರಿ, ಆ.7: ಸೋಮವಾರಪೇಟೆ, ಕುಶಾಲನಗರ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳಿಗೆ ಆ.29ರಂದು ಮತದಾನ ನಡೆಯಲಿದ್ದು, ಒಟ್ಟು 30,786 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. 

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆ.10ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆ.17ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ ಎಂದರು.

ಆ.18ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಆ.20ರಂದು ಉಮೇದುವಾರಿಕೆಗಳನ್ನು ಹಿಂದೆಗೆದುಕೊಳ್ಳಲು ಕೊನೆ ದಿನವಾಗಿದೆ. ಆ.29ರಂದು ಮತದಾನ ಅವಶ್ಯವಿದ್ದರೆ, ಮತದಾನವು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಆ.31ರಂದು ಮರು ಮತದಾನ ಇದ್ದಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ಸೆ.1ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.

ಸೋಮವಾರಪೇಟೆ ಪ.ಪಂ.ನಲ್ಲಿ 11 ವಾರ್ಡ್, ಕುಶಾಲನಗರ ಪ.ಪಂ.ನಲ್ಲಿ 16 ವಾರ್ಡ್, ವೀರಾಜಪೇಟೆ ಪ.ಪಂ.ನಲ್ಲಿ 18 ವಾರ್ಡ್ ಒಟ್ಟು 45 ವಾರ್ಡ್‌ಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟಾರೆ ಮೂರು ಪ.ಪಂ.ವ್ಯಾಪ್ತಿಯಲ್ಲಿ 15,459 ಪುರುಷರು ಹಾಗೂ 15,324 ಮಹಿಳೆಯರು ಹಾಗೂ 3 ಇತರ ಒಟ್ಟು 30,786 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ 11 ಮತಗಟ್ಟೆಗಳು, ಕುಶಾಲನಗರ ಪ.ಪಂ. ವ್ಯಾಪ್ತಿಯಲ್ಲಿ 16 ಮತಗಟ್ಟೆ ಹಾಗೂ ವಿರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ 18 ಮತಗಟ್ಟೆಗಳು ಒಟ್ಟು 45 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸೋಮವಾರಪೇಟೆ ಪ.ಪಂ.ಗೆ 11 ವಾರ್ಡ್‌ಗೆ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಕುಶಾಲನಗರ ಪ.ಪಂ. ವ್ಯಾಪ್ತಿಗೆ 16 ವಾರ್ಡ್‌ಗೆ 2 ಚುನಾವಣಾಧಿಕಾರಿಗಳು ಮತ್ತು 2 ಸಹಾಯಕ ಚುನಾವಣಾಧಿಕಾರಿ, ವೀರಾಜಪೇಟೆ ಪ.ಪಂ. ವ್ಯಾಪ್ತಿಗೆ 18 ವಾರ್ಡ್‌ಗೆ 2 ಚುನಾವಣಾಧಿಕಾರಿಗಳು ಹಾಗೂ 2 ಸಹಾಯಕ ಚುನಾವಣಾಧಿಕಾರಿಗಳು ಸೇರಿ ಒಟ್ಟು 5 ಚುನಾವಣಾಧಿಕಾರಿಗಳು ಹಾಗೂ 5 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಶ್ರೀವಿದ್ಯಾ ವಿವರಿಸಿದರು.

ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಚುನಾವಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಸೆ.1 ರವರೆಗೆ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ 08272-221077ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಇರುತ್ತದೆ. ಆದರೆ ವಿವಿ ಪ್ಯಾಟ್ ಇರುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಣ ಮಾಡಲು ಮತ್ತು ಮತಪತ್ರದಲ್ಲಿ ನೋಟಾವನ್ನು ಮುದ್ರಿಸಲು ರಾಜ್ಯ ಚುನಾವಣಾ ಆಯೋಗವು ನಿರ್ದೇಶನ ನೀಡಿರುತ್ತದೆ.

-ಪಿ.ಐ.ಶ್ರೀವಿದ್ಯಾ, ಜಿಲ್ಲಾಧಿಕಾರಿ.


ಮಸ್ಟರಿಂಗ್, ಡಿ ಮಸ್ಟರಿಂಗ್ ಕಾರ್ಯಗಳ ವಿವರ
ಸೋಮವಾರಪೇಟೆ ಹಾಗೂ ಕುಶಾಲನಗರ ಪ.ಪಂ. ವ್ಯಾಪ್ತಿಯ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕಾರ್ಯ ಸೋಮವಾರಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ವೀರಾಜಪೇಟೆ ಪ.ಪಂ. ವ್ಯಾಪ್ತಿಯ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ವೀರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಅತೀ ಸೂಕ್ಷ್ಮ, ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಗಳ ವಿವರ:

ಸೋಮವಾರಪೇಟೆ ಪ.ಪಂ.ವ್ಯಾಪ್ತಿಯ 11 ಮತಗಟ್ಟೆಗಳಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ ಹಾಗೂ 6 ಸಾಮಾನ್ಯ ಮತಗಟ್ಟೆಗಳು. ಕುಶಾಲನಗರ ಪ.ಪಂ.ವ್ಯಾಪ್ತಿಯ 16 ಮತಗಟ್ಟೆಗಳಲ್ಲಿ 4 ಸೂಕ್ಷ್ಮ, 3 ಅತೀ ಸೂಕ್ಷ್ಮ ಹಾಗೂ 9 ಸಾಮಾನ್ಯ ಮತಗಟ್ಟೆಗಳು.

ವೀರಾಜಪೇಟೆ ಪ.ಪಂ.ವ್ಯಾಪ್ತಿಯ 18 ಮತಗಟ್ಟೆಗಳಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ ಹಾಗೂ 13 ಸಾಮಾನ್ಯ ಮತಗಟ್ಟೆಗಳಾಗಿವೆ. ಒಟ್ಟು 45 ಮತಗಟ್ಟೆಗಳಲ್ಲಿ 10 ಸೂಕ್ಷ್ಮ, 7 ಅತೀ ಸೂಕ್ಷ್ಮ ಹಾಗೂ 28 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News