ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದಲ್ಲಿ ಒಬ್ಬ ಅಲ್ಪಸಂಖ್ಯಾತ ಸದಸ್ಯರಿರಲಿ: ಬಿ.ಕೆ.ಹರಿಪ್ರಸಾದ್

Update: 2018-08-08 10:41 GMT

ಹೊಸದಿಲ್ಲಿ, ಆ.8: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಮಹತ್ವದ ಮಸೂದೆಗೆ ರಾಜ್ಯಸಭೆ ಸೋಮವಾರ ಅಂಗೀಕಾರ ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಹಲವು ಸದಸ್ಯರು ಜಾತಿ ಜನಗಣತಿಯ ವಿವರಗಳನ್ನು ಬಹಿರಂಗಗೊಳಿಸಿ ಆ ಮಾಹಿತಿಯ ಆಧಾರದಲ್ಲೇ ಮೀಸಲಾತಿ ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಚರ್ಚೆಯನ್ನು ಪ್ರಾರಂಭಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಸರಕಾರ ಪ್ರಸ್ತಾವಿತ ಆಯೋಗದಲ್ಲಿ ಒಬ್ಬ ಮಹಿಳೆಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿ, ಅದೇ ರೀತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯೊಬ್ಬರಿಗೂ ಅದರಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಿದ ಅವರು, 1955ರಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆಯಾಯಿತು ಎಂದರು. ಯುಪಿಎ ಆಡಳಿತಾವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾಮುಖ್ಯತೆ ನೀಡಲಾಗಿತ್ತು ಎಂದ ಹರಿಪ್ರಸಾದ್, ಪ್ರತಿ ಆಯ್ಕೆ ಸಮಿತಿಯಲ್ಲೂ ಇತರ ಹಿಂದುಳಿದ ವರ್ಗಗಳ ಸದಸ್ಯರೊಬ್ಬರು ಇರುತ್ತಿದ್ದರು. ಯುಪಿಎ ಆಡಳಿತಾವಧಿಯಲ್ಲೇ ಸಂಸತ್ ನಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು ಎಂದು ತಿಳಿಸಿದರು.

1993ರಲ್ಲಿ ನರಸಿಂಹರಾವ್ ಆಡಳಿತಾವಧಿಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ 27 ಶೇ, ಮೀಸಲಾತಿ ಕಲ್ಪಿಸಲಾಗಿತ್ತು. 2011ರಲ್ಲಿ ಯುಪಿಎ ಸರಕಾರ ಜಾತಿ ಗಣತಿಯನ್ನು ನಡೆಸಿತು. ದೇಶದಲ್ಲಿ ಇತರ ಹಿಂದುಳಿದ ವರ್ಗಗಳ ಜನರ ಶೇಕಡಾವಾರು ತಿಳಿದುಕೊಳ್ಳುವುದು ಇದರ ಉದ್ದೇಶವಾಗಿತ್ತು. ಜಾತಿ ಗಣತಿಯ ವರದಿಯ ಬಗ್ಗೆ ಮೊದಲು ಅಮಿತ್ ಶಾ ತಿಳಿದುಕೊಳ್ಳಲಿ ಮತ್ತು ಬಹಿರಂಗಪಡಿಸಲಿ ಎಂದು ಹರಿಪ್ರಸಾದ್ ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗು ಇತರ ಹಿಂದುಳಿದ ವರ್ಗಗಳ ಸಮಸ್ಯೆಗಳಲ್ಲಿ ವ್ಯತ್ಯಾಸಗಳಿವೆ. ಎಸ್ಸಿ ಹಾಗು ಎಸ್ಟಿಗಳನ್ನು ಗುರುತಿಸುವುದು ಸುಲಭವಾದರೆ, ಹಿಂದುಳಿದ ವರ್ಗಗಳನ್ನು ಗುರುತಿಸುವುದು ಕಷ್ಟ ಎಂದವರು ಹೇಳಿದರು.

ಪ್ರಮುಖ ನೀತಿಗಳ ವಿಚಾರದಲ್ಲಿ ಸರಕಾರವು ಆಯೋಗದ ಸಲಹೆಗಳನ್ನು ಕೇಳಬೇಕಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಹಾಗು ಆಯೋಗದ ಸದಸ್ಯರ ಅರ್ಹತೆಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ತಿಳಿಸಿದೆ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಗಳ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರುಗಳು ಆಗಿರಬೇಕು ಎಂದು ಕೋರ್ಟ್ ಹೇಳಿದೆ. ಇಂದು ಹೈಕೋರ್ಟ್ ಗಳಲ್ಲಿ ಹಿಂದುಳಿದ ವರ್ಗಗಳ ನ್ಯಾಯಾಧೀಶರುಗಳು ಇರಬಹುದು. ಆದರೆ ಸುಪ್ರೀಂ ಕೋರ್ಟ್ ನಲ್ಲಿ ಹಿಂದುಳಿದ ವರ್ಗಗಳ ಯಾವೊಬ್ಬ ನ್ಯಾಯಾಧೀಶರೂ ಇಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.

ಆಯೋಗದಲ್ಲಿ ಓರ್ವ ಮಹಿಳೆಯಿರಬೇಕು ಮತ್ತು ಅಲ್ಪಸಂಖ್ಯಾತರಲ್ಲಿ ಹಲವರು ಹಿಂದುಳಿದ ವರ್ಗಗಳ ಜನರಿರುವುದರಿಂದ ಅಲ್ಪಸಂಖ್ಯಾತ ಸಮುದಾಯದಿಂದಲೂ ಓರ್ವ ಸದಸ್ಯರಿರಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದವರು ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಅಮಿತ್ ಶಾ ಮತ್ತು ಅವರ ತಂಡಕ್ಕೆ ಹಿಂದುಳಿದ ವರ್ಗಗಳ ಮೇಲೆ ಪ್ರೀತಿಯಿದೆ. ಏಕೆಂದರೆ ಇತರ ಹಿಂದುಳಿದ ವರ್ಗಗಳಲ್ಲಿ ಹೆಚ್ಚಿನವರಿಗೆ ಉದ್ಯೋಗಗಳಿಲ್ಲ. ಲವ್ ಜಿಹಾದ್ ಅಥವಾ ಘರ್ ವಾಪ್ಸಿಯಲ್ಲಿ ಅವರು ನಿರತರಾಗಿದ್ದಾರೆ. ಇತರ ಹಿಂದುಳಿದ ವರ್ಗಗಳ ಹೆಚ್ಚಿನ ಜನರು ಜೈಲುಗಳಲ್ಲಿದ್ದಾರೆ ಎಂದರು.

ಯುಪಿಎಸ್ಸಿಯಲ್ಲಿ ಇತರ ಹಿಂದುಳಿದ ವರ್ಗದವರಿಗೆ ಅವಕಾಶಗಳು ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮೀಸಲಾತಿಯನ್ನು 50 ಶೇ.ಕ್ಕೆ ನಿರ್ಬಂಧಿಸಲು ಹಲವರು ಬಯಸುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ್ದಕ್ಕಾಗಿ ತಾನು ದ್ರಾವಿಡ ಪಕ್ಷಗಳನ್ನು ಅಭಿನಂದಿಸಲು ಇಚ್ಛಿಸುತ್ತೇನೆ ಎಂದು ಹರಿಪ್ರಸಾದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News