ಕರುಣಾನಿಧಿ ಯುಗಾಂತ್ಯ

Update: 2018-08-08 18:49 GMT

ಸುಮಾರು 80 ವರ್ಷಗಳ ಕಾಲ ತಮಿಳುನಾಡು ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ವಿಜೃಂಭಿಸಿದ ಡಿಎಂಕೆ ಅಧ್ಯಕ್ಷ ಮುತ್ತುವೇಲ್ ಕರುಣಾನಿಧಿಯವರು 94ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಬಹುಮುಖ ವ್ಯಕ್ತಿತ್ವದ ಕರುಣಾನಿಧಿ ರಾಜಕಾರಣಕ್ಕೆ ಮಾತ್ರ ತಮ್ಮ ವ್ಯಕ್ತಿತ್ವವನ್ನು ಸೀಮಿತಗೊಳಿಸಿದವರಲ್ಲ. ಏಳೂವರೆ ದಶಕಗಳ ಕಾಲ ವಿಧಾನಸಭಾ ಸದಸ್ಯರಾಗಿ, ಐದು ದಶಕಗಳ ಕಾಲ ಸಿನೆಮಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು 50 ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿ, ಐದು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ತಮಗೆ ಸರಿಸಾಟಿ ಇಲ್ಲದಂತೆ ಬೆಳೆದು ನಿಂತವರು ಕರುಣಾನಿಧಿ. ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಇನ್ನು ಐದು ವರ್ಷ ಗತಿಸಿದರೆ ಶತಮಾನ ಕಾಲ ಬದುಕಿದ ಹಿರಿಮೆಗೆ ಪಾತ್ರವಾಗುತ್ತಿದ್ದ ಕರುಣಾನಿಧಿಯವರ ಅಗಲಿಕೆಯಿಂದ ದ್ರಾವಿಡ ಚಳವಳಿಯ ಕೊನೆಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ. ಪ್ರತಿಭಾವಂತ ಬರಹಗಾರರಾಗಿದ್ದ, ಅಸ್ಖಲಿತ ವಾಕ್ಪಟುವಾಗಿದ್ದ ಕರುಣಾನಿಧಿ, 1960ರಲ್ಲಿ ಡಿಎಂಕೆ ಸಂಸ್ಥಾಪಕ ಅಣ್ಣಾ ದೊರೈ ಅವರಿಂದ ಪಕ್ಷದ ನಾಯಕತ್ವವನ್ನು ವಹಿಸಿಕೊಂಡರು. ಆನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. ರಾಜಕೀಯ ಹಿನ್ನೆಲೆ ಇಲ್ಲದ, ಸಾಮಾಜಿಕ ಪ್ರತಿಷ್ಠೆ ಇಲ್ಲದ, ಹಳ್ಳಿಗಾಡಿನ ಸಾಮಾನ್ಯ ಹಿನ್ನೆಲೆಯಿಂದ ಬಂದು ಈ ಎತ್ತರಕ್ಕೆ ಬೆಳೆದು ನಿಂತ ಕರುಣಾನಿಧಿಯವರ ಸಾಧನೆ ಸಣ್ಣದಲ್ಲ. ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ ಅವರು ಯಶಸ್ಸಿನ ಶಿಖರದತ್ತ ಮುನ್ನಡೆದು ಬಂದವರು.

ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ವಿಚಾರವಾದಿ, ಸ್ವಾಭಿಮಾನಿ ಚಳವಳಿಯಿಂದ ಪ್ರೇರಿತರಾಗಿ 14ನೇ ವಯಸ್ಸಿನಲ್ಲೇ ತನ್ನನ್ನು ದ್ರಾವಿಡ ಚಳವಳಿಯಲ್ಲಿ ತೊಡಗಿಸಿಕೊಂಡ ಕರುಣಾನಿಧಿಯವರಿಗೂ ತಮಿಳು ಚಿತ್ರರಂಗಕ್ಕೂ ಬಿಡಲಾಗದ ನಂಟು. ಅನೇಕ ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದ ಅವರು, ಸಿನೆಮಾ ಮಾಧ್ಯಮವನ್ನು ತಮ್ಮ ವಿಚಾರಗಳ ಪ್ರಚಾರಕ್ಕೆ ಬಳಸಿಕೊಂಡರು. ಬದುಕಿನುದ್ದಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾಲಿಡದಂತೆ ದ್ರಾವಿಡ ಕೋಟೆಯನ್ನು ಕಾಯ್ದುಕೊಂಡವರು. ಎಂದಿಗೂ ತಮ್ಮ ವಿಚಾರಗಳಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಯೌವನದಲ್ಲಿ ಎಡಪಂಥೀಯ ವಿಚಾರಗಳಿಂದ ಪ್ರಭಾವಿತರಾಗಿದ್ದ ಕರುಣಾನಿಧಿಯವರು ತಮ್ಮ ಮಗನಿಗೆ ರಶ್ಯದ ಕ್ರಾಂತಿಕಾರಿ ನಾಯಕ ಸ್ಟಾಲಿನ್ ಅವರ ಹೆಸರನ್ನಿಟ್ಟರು. ಕಟ್ಟಾ ನಾಸ್ತಿಕರಾಗಿದ್ದ ಅವರು ಉಳಿದ ದ್ರಾವಿಡ ನಾಯಕರಂತೆ ಎಂದೂ ಗುಡಿ ಗುಂಡಾರಗಳಿಗೆ ಹೋಗಲಿಲ್ಲ. ಯಾಗ ಹೋಮಗಳನ್ನು ಮಾಡಿಸಲಿಲ್ಲ. 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೋಮುವಾದಿಗಳು ನೆಲಸಮಗೊಳಿಸಿದಾಗ ಅದನ್ನು ಉಗ್ರವಾಗಿ ಖಂಡಿಸಿದ್ದರು. ಕರುಣಾನಿಧಿಯವರು ಆಗ ಉತ್ತರಭಾರತದಲ್ಲಿ ರಾಮಲೀಲಾ ಕಾರ್ಯಕ್ರಮದ ಹೆಸರಿನಲ್ಲಿ ರಾವಣನ ಪ್ರತಿಕೃತಿಗಳಿಗೆ ಅಗ್ನಿಸ್ಪರ್ಶ ಮಾಡುತ್ತಿರುವುದನ್ನು ಉಗ್ರವಾಗಿ ಖಂಡಿಸಿದರು. ಕೆಲ ವರ್ಷಗಳ ಹಿಂದೆ ಸೇತು ಸಮುದ್ರ ಯೋಜನೆಗೆ ಸಂಬಂಧಿಸಿದಂತೆ ಸಂಘಪರಿವಾರದ ನಿಲುವನ್ನು ವಿರೋಧಿಸಿದ ಅವರು, 17 ಲಕ್ಷ ವರ್ಷಗಳ ಹಿಂದೆ ಶ್ರೀರಾಮ ಈ ಸೇತುವೆ ನಿರ್ಮಿಸಿದನೆಂದು ಹೇಳಲು ಏನು ಆಧಾರವಿದೆ ಎಂದು ಪ್ರಶ್ನಿಸಿದ್ದರು.

ಅಧಿಕಾರವಿದ್ದಾಗಲೂ ಮಠಾಧೀಶರಿಂದ, ಜಗದ್ಗುರುಗಳಿಂದ ದೂರವಿದ್ದ ಅವರನ್ನು ಕಂಚಿಕಾಮಕೋಟಿ ಮಠದ ಸ್ವಾಮೀಜಿಯವರು ಒಮ್ಮೆ ಭೇಟಿಯಾಗಲು ಬಂದಿದ್ದರು. ಸ್ವಾಮೀಜಿಯವರೇ ಕರುಣಾನಿಧಿಯವರ ಭೇಟಿಗೆ ಬಂದದ್ದು ದೊಡ್ಡ ಸುದ್ದಿಯಾಗಿ ಟಿವಿ ಕ್ಯಾಮರಾಗಳನ್ನು ಹಿಡಿದುಕೊಂಡು ವರದಿಗಾರರು ಮುಖ್ಯಮಂತ್ರಿಗಳ ಕಚೇರಿಗೆ ಬಂದಿದ್ದರು. ಟಿವಿ ಕ್ಯಾಮರಾಗಳ ಎದುರಿಗೆ ಕಂಚಿಶ್ರೀಗಳು ಭಗವದ್ಗೀತೆಯ ಒಂದು ಪ್ರತಿಯನ್ನು ಕರುಣಾನಿಧಿಯವರಿಗೆ ನೀಡಿದ್ದರು. ನಾಸ್ತಿಕ ಕರುಣಾನಿಧಿಯವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಅವರ ಉದ್ದೇಶವಾಗಿದ್ದಿರಬಹುದು. ಕರುಣಾನಿಧಿಯವರು ಏನು ಮಾಡುತ್ತಾರೆ ಎಂಬ ಕುತೂಹಲ ಸುದ್ದಿಗಾರರಿಗೆ ಇತ್ತು. ಅವರು ಸ್ವಾಮೀಜಿಯಿಂದ ಭಗವದ್ಗೀತೆಯ ಪ್ರತಿಯನ್ನು ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ತಮ್ಮ ಪುಸ್ತಕದ ಕಪಾಟಿನಲ್ಲಿದ್ದ ‘ಭಗವದ್ಗೀತೆ - ಒಂದು ವಿಮರ್ಶೆ’ ಎಂಬ ಪುಸ್ತಕವನ್ನು ಅವರಿಗೆ ನೀಡಿದ್ದರು. ಪೆರಿಯಾರ್ ಅವರ ಅನುಯಾಯಿ ವೀರಸ್ವಾಮಿ ಬರೆದ ಈ ಪುಸ್ತಕ ಭಗವದ್ಗೀತೆಯ ಬಗೆಗಿನ ವಿಮರ್ಶೆಯಾಗಿತ್ತು. ಆಗ ಸ್ವಾಮೀಜಿ ಈ ಪುಸ್ತಕವನ್ನು ಅನಿವಾರ್ಯ ವಾಗಿ ಸ್ವೀಕರಿಸಿದ್ದರು. ಇದು ಕರುಣಾನಿಧಿಯವರ ವೈಚಾರಿಕ ಬದ್ಧತೆಗೆ ಸಾಕ್ಷಿಯಾದ ಘಟನೆ.

ರಾಜ್ಯಗಳ ಸ್ವಾಯತ್ತೆಗಾಗಿ ಬದುಕಿನುದ್ದಕ್ಕೂ ಹೋರಾಡುತ್ತಾ ಬಂದ ಅವರು ಉತ್ತರ ಭಾರತದ ಹಿಂದಿ ಹೇರಿಕೆ ನೀತಿಯನ್ನು ಖಂಡತುಂಡವಾಗಿ ವಿರೋಧಿಸಿದ್ದರು. ಹೀಗಾಗಿ ತಮಿಳು ನಾಡಿನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರಲು ಕೇಂದ್ರ ಸರಕಾರ ಹಿಂಜರಿಯಿತು. ಆದರೆ, ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮತ್ತೆ ಹಿಂದಿ ಹೇರಿಕೆಯ ಹುನ್ನಾರ ನಡೆದಿದೆ. ಬಹುಮುಖಿ ಭಾರತದ ಕಲ್ಪನೆಯಲ್ಲಿ ಗಾಢನಂಬಿಕೆ ಹೊಂದಿದ್ದ ಅವರು ಸಂಘಪರಿವಾರದ ಹಿಂದುತ್ವ ಕಾರ್ಯಸೂಚಿಯನ್ನು ಬದುಕಿನುದ್ದಕ್ಕೂ ವಿರೋಧಿಸುತ್ತಾ ಬಂದವರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಬಿಜೆಪಿ ಜೊತೆಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡರೂ ತಮ್ಮ ವೈಚಾರಿಕ ಬದ್ಧತೆಯನ್ನು ಅವರು ಬಿಟ್ಟುಕೊಡಲಿಲ್ಲ. ಇಂತಹ ಅಸಾಮಾನ್ಯ ವ್ಯಕ್ತಿತ್ವದ ಕರುಣಾನಿಧಿ ಡಿಎಂಕೆ ಪಕ್ಷವನ್ನು ಜನಸಾಮಾನ್ಯರ ನಡುವೆ ಕೊಂಡೊಯ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಕೀಯ ತಂತ್ರಗಾರಿಕೆಗೆ ಹೆಸರಾದ ಕರುಣಾನಿಧಿ ಅವರು ಶಿವಾಜಿ ಗಣೇಶನ್, ಎಂ. ಜಿ. ರಾಮಚಂದ್ರನ್ ಅಂತಹವರನ್ನು ಚಿತ್ರರಂಗದಲ್ಲಿ ಮುಂಚೂಣಿಗೆ ತಂದರು. ಆದರೆ, ಡಿಎಂಕೆ ಪಕ್ಷದಲ್ಲಿ ತನ್ನ ಉತ್ತರಾಧಿಕಾರಿಗಳನ್ನಾಗಿ ತನ್ನ ಮಕ್ಕಳನ್ನೇ ಆಯ್ಕೆ ಮಾಡಿಕೊಂಡಿದ್ದು ಅನೇಕರ ಟೀಕೆಗೆ ಕಾರಣವಾಯಿತು. ಅವರ ಈ ದೌರ್ಬಲ್ಯದಿಂದಾಗಿ ವೈಕೋ ಅವರಂತಹ ನಾಯಕರು ಪಕ್ಷದಿಂದ ಹೊರಗೆ ಹೋಗಿ ಬೇರೆ ಪಕ್ಷವನ್ನು ಕಟ್ಟಿದರು. ಬದುಕಿನುದ್ದಕ್ಕೂ ತಮಿಳುನಾಡಿನಲ್ಲಿ ಕೋಮುವಾದಿಗಳು ಪ್ರವೇಶಿಸದಂತೆ ಎಚ್ಚರವಹಿಸಿದ್ದ ಅವರು, ಕೊನೆಯ ದಿನಗಳಲ್ಲಿ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಚಟುವಟಿಕೆಯಲ್ಲಿ ತೊಡಗಿರುವುದನ್ನು ಕಂಡು ಅಸಹಾಯಕರಾದಂತೆ ಕಾಣುತ್ತಿದ್ದರು.

‘ಹಿಂದೂ ಮುನ್ನನಿ’ ಮೂಲಕ ಸಂಘಪರಿವಾರ ತಮಿಳುನಾಡಿನಲ್ಲಿ ಕಳೆದ ಒಂದು ದಶಕದಿಂದ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿತು. ಒಂದು ಕಾಲದಲ್ಲಿ ವಿಚಾರವಾದಿ ಹಾಗೂ ನಾಸ್ತಿಕವಾದಿ ಚಳವಳಿಗೆ ಹೆಸರಾದ ತಮಿಳುನಾಡಿನಲ್ಲಿ ಪೆರುಮಾಳ್ ಮುರುಗನ್ ಅವರಂತಹ ಲೇಖಕರು ಕೋಮುವಾದಿ ಶಕ್ತಿಗಳಿಗೆ ಹೆದರಿ ತಮ್ಮ ಪುಸ್ತಕದ ಪ್ರಕಟನೆಯನ್ನು ತಡೆಹಿಡಿಯಬೇಕಾಯಿತು. ಕಾವೇರಿ ವಿವಾದ ಪ್ರಶ್ನೆಯಲ್ಲಿ ಅವರು ತಮ್ಮ ರಾಜ್ಯದ ಪರವಾಗಿ ಬಲವಾಗಿ ವಾದಿಸುತ್ತಿದ್ದರೂ ಕರ್ನಾಟಕದ ಬಗ್ಗೆ ಹಗೆಯ ಭಾವನೆಯನ್ನು ಹೊಂದಿರಲಿಲ್ಲ. ಕಾವೇರಿ ಸಮಸ್ಯೆಯನ್ನು ಸೌಹಾರ್ದದಿಂದ ಬಗೆಹರಿಸಲು ಅವರು ಸಕಾರಾತ್ಮಕ ಧೋರಣೆಯನ್ನು ತಾಳಿದ್ದರು. ಹೀಗಾಗಿ ಕರ್ನಾಟಕದ ರಾಜಕೀಯ ನಾಯಕರೊಂದಿಗೆ ಅವರಿಗೆ ಸೌಹಾರ್ದ ಸಂಬಂಧವಿತ್ತು. ಕರ್ನಾಟಕದಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅವರು ಬಂದಿದ್ದರು. ಇದೇ ರೀತಿ ಚೆನ್ನೈಯಲ್ಲಿ ಕರ್ನಾಟಕದ ಕವಿ ಸರ್ವಜ್ಞನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಕರುಣಾನಿಧಿ ನಿಧನದಿಂದ ತಮಿಳುನಾಡಿನ ರಾಜಕೀಯದಲ್ಲಿ ಒಂದು ವಿಧದ ಶೂನ್ಯ ಉಂಟಾಗಿದೆ. ಕಳೆದ ವರ್ಷ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ನಿಧನ ಹೊಂದಿದ್ದರು. ಈಗ ಕರುಣಾನಿಧಿ ನಿರ್ಗಮಿಸಿದ್ದಾರೆ. ಈಗ ಎರಡೂ ದ್ರಾವಿಡ ಪಕ್ಷಗಳಲ್ಲಿ ಆ ಎತ್ತರದ ನಾಯಕರು ಇಲ್ಲ. ಕರುಣಾನಿಧಿ ಉತ್ತರಾಧಿಕಾರಿಯಾಗಿ ಅವರ ಪುತ್ರ ಸ್ಟಾಲಿನ್ ಹೆಸರು ಕೇಳಿ ಬರುತ್ತಿದ್ದರೂ ಅವರ ರಾಜಕೀಯ ನಾಯಕತ್ವ ಇನ್ನು ಒರೆಗೆ ಹಚ್ಚಬೇಕಾಗಿದೆ. ಇಂತಹ ಶೂನ್ಯ ವಾತಾವರಣದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ನೆಲೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹಜವಾಗಿ ಪ್ರಯತ್ನಿಸಬಹುದು. ಈ ಸವಾಲನ್ನು ದ್ರಾವಿಡ ಪಕ್ಷಗಳು ಮತ್ತು ದ್ರಾವಿಡ ಜನತೆ ಹೇಗೆ ಎದುರಿಸಿ ಹೊಸ ದಾರಿ ಕಂಡುಕೊಳ್ಳುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News