ಉಸ್ತುವಾರಿ ಸಚಿವರು ಬದುಕಿದ್ದಾರೋ, ಸತ್ತಿದ್ದಾರೋ: ಯಡಿಯೂರಪ್ಪ ಪ್ರಶ್ನೆ

Update: 2018-08-09 13:37 GMT

ಬೀದರ್, ಆ. 9: ‘ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರೋ, ಸತ್ತಿದ್ದಾರೋ ಗೊತ್ತಿಲ್ಲ. ನಾವೇನಾದರೂ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಐಎಂಎಸ್) ಆಸ್ಪತ್ರೆಗೆ ಬಂದರೆ, ಬೇರೆ ಆಸ್ಪತ್ರೆಗೆ ದಾಖಲಾಗಬೇಕಾದ ದುಸ್ಥಿತಿ ಇದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದಲ್ಲಿ ಬಿಐಎಂಎಸ್ ಆಸ್ಪತ್ರೆ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ‘ನನ್ನ ಜೀವನದಲ್ಲಿ ಈ ರೀತಿಯ ದುಸ್ಥಿತಿಯಲ್ಲಿರುವ ಆಸ್ಪತ್ರೆ ನೋಡಿಲ್ಲ. ಈ ಆಸ್ಪತ್ರೆಯನ್ನು ಯಾವ ಪದದಿಂದ ವರ್ಣನೆ ಮಾಡಬೇಕೋ ಗೊತ್ತಿಲ್ಲ’ ಎಂದು ಟೀಕಿಸಿದರು.

‘ನಾನು ಈ ಆಸ್ಪತ್ರೆಯಲ್ಲಿ ಹೆಚ್ಚಿನ ಸಮಯವಿದ್ದರೆ ನನ್ನ ಆರೋಗ್ಯವೂ ಎಲ್ಲಿ ಕೆಡುತ್ತದೋ ಎಂಬ ಸಂಶಯ. ಹೀಗಾಗಿ ತರಾತುರಿಯಲ್ಲಿ ಆಸ್ಪತ್ರೆ ವೀಕ್ಷಣೆ ಮಾಡಿ ಹೊರಬಂದಿದ್ದೇನೆ’ ಎಂದ ಅವರು, ‘ನಾನು ನನ್ನ ಜೀವನದಲ್ಲೆ ಇಂಥ ಅವ್ಯವಸ್ಥೆ ಇರುವ ಆಸ್ಪತ್ರೆಯನ್ನು ನೋಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಗೆ ಬಂದಿದ್ದಾರೋ ಇಲ್ಲವೋ ಗೊತ್ತಿಲ್ಲ’ ಎಂದ ಯಡಿಯೂರಪ್ಪ, ‘ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಾಧ್ಯವಿಲ್ಲ ಎಂದರೆ ಕೂಡಲೇ ಆಸ್ಪತ್ರೆಗೆ ಬೀಗ ಹಾಕಿ’ ಎಂದು ಆಸ್ಪತ್ರೆ ನಿರ್ದೇಶಕ ಡಾ.ಚನ್ನಣ್ಣನನ್ನು ತರಾಟೆಗೆ ತೆಗೆದುಕೊಂಡರು.

ಪ್ರವಾಸ ಆರಂಭ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಹಾಗೂ ಪ್ರಧಾನಿ ಮೋದಿ ನೇತೃತ್ವದ ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಂಘಟಿಸುವ ಗುರಿ ಇದೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶ ಹೊಂದಲಾಗಿದೆ ಎಂದರು.

ಈ ವೇಳೆ ಸಂಸದ ಭಗವಂತ್ ಖೂಬಾ, ಪರಿಷತ್ ಸದಸ್ಯರಾದ ರವಿಕುಮಾರ್, ರಘುನಾಥ್ ರಾವ್ ಮಲ್ಕಾಪುರೆ, ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.

‘ಸುಸಜ್ಜಿತ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಬೀದರ್ ಆಸ್ಪತ್ರೆ ಅತ್ಯಂತ ದುಸ್ಥಿತಿಯಲ್ಲಿದೆ. ಹೀಗಾಗಿ ರಾಜ್ಯ ಸರಕಾರ ಆಸ್ಪತ್ರೆಯ ಭ್ರಷ್ಟಾಚಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಇಲ್ಲಿನ ಜನರ ಬಗ್ಗೆ ಕಳಕಳಿ ಇದ್ದರೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು’

-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News