ಬೆಂಗಳೂರು: ಭೂಮಿ ಹಕ್ಕೊತ್ತಾಯಕ್ಕೆ ಆಗ್ರಹಿಸಿ ಕೊಡವರ ಧರಣಿ

Update: 2018-08-09 13:30 GMT

ಬೆಂಗಳೂರು, ಆ.9: ಕೊಡವ ಭೂಮಿ ಹಕ್ಕೊತ್ತಾಯ ಮಂಡಿಸಿ, ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಕೊಡವ ಸಮುದಾಯದವರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಪುರಭವನದ ಎದುರು ಜಮಾಯಿಸಿದ ಕೊಡವ ಸಮುದಾಯದ ಸದಸ್ಯರು ವಿಶ್ವ ಆದಿಮ ಸಂಜಾತ ಮೂಲ ನಿವಾಸಿಗಳ ಹಕ್ಕುಗಳ ದಿನಾಚರಣೆ ಪ್ರಯುಕ್ತ ಕೊಡವ ನೆಲದ ಆದಿಮ ಸಂಜಾತ ಬುಡಕಟ್ಟು ಜನಾಂಗ ಎಂಬುದು ಸೂರ್ಯನಷ್ಟೇ ಸತ್ಯ ಎಂದರು. ಅನ್ನದಾತೆಯಾಗಿರುವ ಕೊಡವರ ಕುಲತಿಳಕಳಾದ ಜಲಧಾತೆ (ಜಲದೇವಿ) ಕಾವೇರಿಯಷ್ಟೆ ನಿರ್ಮಲ ಮತ್ತು ನಮಗೆ ಆಶ್ರಯದಾತೆಯಾಗಿರುವ ಈ ಭೂದೇವಿಯಷ್ಟೆ ಪರಮ ಪವಿತ್ರ ಎಂದು ಪ್ರತಿಭಟನಾಕಾರರು ಹೇಳಿದರು.

ಕಳೆದ 62 ವರ್ಷಗಳಿಂದ ಜೀವನದಿ ಕಾವೇರಿಯಿಂದ ಅದೆಷ್ಟೋ ಪ್ರಮಾಣದ ನೀರು ಹರಿದುಹೋಗಿದೆ. ಕೊಡಗು ರಾಜ್ಯ ಕರ್ನಾಟಕಕ್ಕೆ ಸೇರಿದಾಗಿನಿಂದ ಇಲ್ಲಿಯ ವರೆಗೂ ಕೊಡವರ ಎಲ್ಲಾ ಹಕ್ಕುಗಳನ್ನು ಹಂತ ಹಂತವಾಗಿ ಕಸಿಯುತ್ತಾ ಬಂದಿದ್ದು, ನಮ್ಮ ನೆಲದ ಎಲ್ಲಾ ಸಂಪನ್ಮೂಲಗಳನ್ನು ಬರಿದು ಮಾಡಿದ್ದಾರೆ. ಯುಗಯುಗಗಳಿಂದ ವೇದಗಳ ಕಾಲದಿಂದಲೂ ಕೊಡವ ಬುಡಕಟ್ಟಿನ ತಾಯಿನೆಲ ಜನ್ಮಭೂಮಿ ಕೊಡಗು ಭರತ ವರ್ಷ ಮತ್ತು ಆರ್ಯವರ್ತಗಳ ಛಪ್ಪನ್ 56 ಜನಪದ ರಾಷ್ಟ್ರಗಳ ಪೈಕಿ, ಕ್ರೋಡದೇಶವೆಂದು ಪ್ರಚಲಿತದಲ್ಲಿದ್ದು, ಮುಂದೆ ಸ್ವತಂತ್ರ ದೇಶ, ರಾಜಾಧಿಪತ್ಯ, ಬ್ರಿಟಿಷ್ ಇಂಡಿಯಾ ಪ್ರಾಂತ ಮತ್ತು ಸ್ವತಂತ್ರ ಭಾರತದ ಸಂವಿಧಾನದಡಿಯಲ್ಲಿ ಪ್ರತ್ಯೇಕ ಸಿ ರಾಜ್ಯವಾಗಿ ಇತ್ತು ಎಂದರು.

ಇನ್ನು ಕರ್ನಾಟಕಕ್ಕೆ ಸದಾಕಾಲ ಕೊಡಗು ಓರ್ವ ಕಪ್ಪ ಒಪ್ಪಿಸುವ ಸಾಮಂತನಂತೆ ಅವರ ಅಧೀನ ಪ್ರಜೆಗಳನ್ನಾಗಿಯೂ ಎರಡನೆ ದರ್ಜೆಯ ನಾಗರಿಕರನ್ನಾಗಿಯೂ ಪರಿಗಣಿಸಿ ಅಪಾರ್ಥೈಟ್ ನೀತಿಯನ್ನು ಅನುಸರಿಸುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News