ಡಿಕೆಶಿ ಗೆ ಬಳ್ಳಾರಿಯ ಉಸ್ತುವಾರಿ ಕೊಟ್ಟಿರುವುದು ಕಟುಕನ ಕೈಗೆ ಕುರಿ ನೀಡಿದಂತೆ: ಎಸ್.ಆರ್.ಹೀರೆಮಠ್ ವ್ಯಂಗ್ಯ

Update: 2018-08-09 14:09 GMT

ಬಳ್ಳಾರಿ, ಆ. 9: ‘ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಕೊಟ್ಟಿರುವುದು ಕಟುಕನ ಕೈಗೆ ಕುರಿ ನೀಡಿದಂತೆ’ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೆಮಠ್ ವ್ಯಂಗ್ಯವಾಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಈ ಹಿಂದೆ ಇಂಧನ ಸಚಿವರಾಗಿದ್ದ ವೇಳೆ ಸೋಲಾರ್ ಹಗರಣ, ರಿಪಬ್ಲಿಕ್ ಆಫ್ ರಾಮನಗರ ಮಾಡಿದ್ದು, ಇಂತಹ ವ್ಯಕ್ತಿಗೆ ಬಳ್ಳಾರಿ ಉಸ್ತುವಾರಿ ನೀಡಿದ್ದು, ಸರಕಾರದ ನಿಷ್ಕ್ರಿಯತೆಗೆ ಸಾಕ್ಷಿ ಎಂದು ಟೀಕಿಸಿದರು.

ಮೈಸೂರು ಮಿನರಲ್ಸ್ ಲಿಮಿಟೆಡ್ ಕಂಪೆನಿಯಿಂದ 10.8ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಶಿವಕುಮಾರ್ ಲೂಟಿ ಮಾಡಿದ್ದಾರೆ. ಹೀಗಾಗಿ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಹೀರೆಮಠ್, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಅಂದಿನ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ನೀಡಿದ ಎರಡು ವರದಿಗಳು ಇದುವರೆಗೂ ಅನುಷ್ಠಾನ ಆಗಿಲ್ಲ. ಮೈತ್ರಿ ಸರಕಾರಕ್ಕೆ ಬದ್ಧತೆ ಇದ್ದರೆ ಕೂಡಲೇ ಆ ವರದಿ ಅನುಷ್ಠಾನ ಮಾಡಬೇಕು ಎಂದು ಹಿರೇಮಠ್ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News