ಶ್ರೀರಾಮ ಸೇನೆಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿಲ್ಲ: ಮುತಾಲಿಕ್

Update: 2018-08-09 14:17 GMT

ಬೆಂಗಳೂರು, ಆ.9: ಹಿಂದೂ ವಕೀಲರ ಸಮಾವೇಶವನ್ನು ಆ.12 ರಂದು ಶ್ರೀರಾಮ ಸೇನೆಯ ವತಿಯಿಂದ ನಗರದ ಗಾಂಧಿ ಬಜಾರ್‌ನಲ್ಲಿನ ಪೈ ವಿಸ್ಟಾ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ತಡೆಯಲು ಕಾನೂನು ಸಲಹಾ ಸಮಿತಿಯನ್ನು ರಚನೆ ಮಾಡುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಯ್ದ 500 ಕ್ಕೂ ಅಧಿಕ ವಕೀಲರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಅಸ್ಸಾಂ ಸೇರಿದಂತೆ ದೇಶದ ಇನ್ನಿತರೆ ರಾಜ್ಯಗಳಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರಿಂದ ಹಿಂದೂಗಳಿಗೆ ಭಾರಿ ಅನ್ಯಾಯವಾಗುತ್ತಿದೆ. ಹೀಗಾಗಿ, ಕೂಡಲೇ ಅವರನ್ನು ಹೊರ ಹಾಕಬೇಕು. ಸಂಸತ್‌ನಲ್ಲಿ ವಿಶೇಷ ನಿರ್ಣಯದ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಸೇರಿದಂತೆ ಮತ್ತಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಹಾಗೂ ಅದಕ್ಕೆ ಸೂಕ್ತ ಕಾನೂನು ಮಾರ್ಗಗಳನ್ನು ಅನುಸರಿಸುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀರಾಮ ಸೇನೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರಕಾರ ಅಧಿಕೃತವಾಗಿ ಇದುವರೆಗೂ ಯಾವುದೇ ಸಂಘಟನೆಯ ಹೆಸರನ್ನು ಉಲ್ಲೇಖ ಮಾಡದಿದ್ದರೂ, ನಮ್ಮ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News