ಸರಳ ವ್ಯಕ್ತಿತ್ವದ ಭಾಷಾ ಪ್ರೇಮಿ ಸುಮತೀಂದ್ರ ನಾಡಿಗ್: ಸಾಹಿತಿ ಹಳೇಕೋಟೆ ರಮೇಶ್
ಮೂಡಿಗೆರೆ, ಆ.9: ಡಾ.ಸುಮತೀಂದ್ರ ನಾಡಿಗ್ ಕನ್ನಡ ಸಾಹಿತ್ಯ ಕ್ಷೇತ್ರದ ಧ್ರುವತಾರೆ, ಸರಳ ವ್ಯಕ್ತಿತ್ವದ ಭಾಷಾ ಪ್ರೇಮಿ ಎಂದು ಸಾಹಿತಿ ಹಳೇಕೋಟೆ ರಮೇಶ್ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಏರ್ಪಡಿಸಿದ್ದ ಕವಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪರಿಸರ ಹಾಗೂ ಶಿಶು ಸಾಹಿತ್ಯದ ಬಗ್ಗೆ ಅಪಾರವಾದ ಒಲವು ಹೊಂದಿದ್ದರು. ಎಂದಿಗೂ ಪ್ರಚಾರದ ಗೀಳಿಗೆ ಜೋತುಬೀಳದೆ, ಎಲೆಮರೆಯ ಕಾಯಿಯಂತೆ ಕನ್ನಡ ಕಾವ್ಯಲೋಕದಲ್ಲಿ ಮತ್ತು ಭಾಷೆ, ಭೂಮಿಯ ಸೇವೆಯನ್ನು ತನ್ನ ಜೀವನದ ಕೊನೆಯವರೆಗೂ ಮಾಡುತ್ತಾ ಬಂದಿದ್ದರು. ಓರ್ವ ವಿಮರ್ಶಕ, ಅದ್ಯಾಪಕ, ಚಿಂತಕ, ಸಾಹಿತಿಯಾಗಿ ಗುರುತಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಅವರ ಅಗಲಿಕೆಯಿಂದ ಬಹಳ ದುಃಖವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್.ಅಶೋಕ್, ಸವಿತಾ ರವಿ, ಬಿ.ಟಿ.ನಟರಾಜ್, ಆರ್.ಪ್ರಕಾಶ್, ಎಂ.ಸಿ.ಹೂವಪ್ಪ, ಎಂ.ಎಸ್.ನಾಗರಾಜ್, ಹಾ.ಬಾ.ನಾಗೇಶ್ ಉಪಸ್ಥಿತರಿದ್ದರು.
ಸುಮತೀಂದ್ರ ನಾಡಿಗ್ ಅವರು ಕಳೆದ 2011ರಲ್ಲಿ ಮೂಡಿಗೆರೆಯಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಸಮ್ಮೇಳನವನ್ನು ಪ್ರೀತಿಯಿಂದ ಆಶ್ವಾದಿಸಿ, ಉದಯೋನ್ಮುಖ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದರು. ಅವರು ನಮ್ಮನ್ನು ಅಗಲಿದ್ದಾರೆ. ಅವರ ವಿಚಾರಧಾರೆಗಳು ಕೃತಿಗಳಾಗಿ ನಮ್ಮೊಂದಿಗೆ ಸದಾ ಇರುತ್ತವೆ
- ಮಗ್ಗಲಮಕ್ಕಿ ಗಣೇಶ್, ತಾಲೂಕು ಕಸಾಪ ಅಧ್ಯಕ್ಷರು