ಚಿಕ್ಕಮಗಳೂರು: ಪೆಟ್ರೋಲ್ ಬಂಕ್‍ನಲ್ಲಿ ವಂಚನೆ ಆರೋಪ; ಸಾರ್ವಜನಿಕರಿಂದ ಧರಣಿ

Update: 2018-08-09 15:18 GMT

ಚಿಕ್ಕಮಗಳೂರು,ಆ.9: ನಗರದ ಪೆಟ್ರೋಲ್ ಬಂಕ್‍ವೊಂದರಲ್ಲಿ ಕಡಿಮೆ ಪೆಟ್ರೋಲ್ ಹಾಕಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಡಾಕ್ ಪೆಟ್ರೋಲ್ ಬಂಕ್ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.

ಗುರುವಾರ ಬೆಳಿಗ್ಗೆ ನಗರದ ಕೆಎಸ್‍ಆರ್‍ಟಿಸಿ ಬಸ್‍ ನಿಲ್ದಾಣದ ಮುಂಭಾಗದಲ್ಲಿರುವ ಅಡಾಕ್ ಪೆಟ್ರೋಲ್ ಬಂಕ್‍ನಲ್ಲಿ ವ್ಯಕ್ತಿಯೋರ್ವರು ಬೈಕ್‍ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ತೆರಳಿದ್ದರು. ಈ ವೇಳೆ ಬಂಕ್‍ನ ಸಿಬ್ಬಂದಿ 100 ರೂ. ಪಡೆದಿದ್ದು, ಆದರೆ ಕೇವಲ 30 ರೂ. ಮಾತ್ರ ಪೆಟ್ರೋಲ್ ಹಾಕಿದ್ದಾರೆಂದು ಅನುಮಾನಗೊಂಡ ಶಿವರಾಜ್ ಬೈಕ್ ಟ್ಯಾಂಕ್ ಪರಿಶೀಲಿಸಿದಾಗ ಟ್ಯಾಂಕ್‍ನಲ್ಲಿ ಕೇವಲ 30 ರೂ.ಗಳಷ್ಟು ಪೆಟ್ರೋಲ್ ಮಾತ್ರ ಕಂಡು ಬಂದಿದೆ ಎನ್ನಲಾಗಿದ್ದು, ಈ ವೇಳೆ ಬಂಕ್ ಸಿಬ್ಬಂದಿ ಮತ್ತು ಶಿವರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಬಂಕ್‍ನ ಸಮೀಪದಲ್ಲಿದ್ದ ಸಾರ್ವಜನಿಕರು ಗುಂಪುಗೊಂಡು 'ಬಂಕ್‍ನಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎಂಬ ದೂರು ಅನೇಕ ಬಾರಿ ಕೇಳಿ ಬರುತ್ತಿದೆ. ಬಂಕ್ ಮಾಲೀಕರು ಸ್ಥಳಕ್ಕೆ ಬರಬೇಕು ಹಾಗೂ ಬಂಕ್ ಸೀಜ್ ಮಾಡಬೇಕು' ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಪೊಲೀಸರು ಶಿವರಾಜ್‍ಗೆ ನೀಡಿದ ಪೆಟ್ರೋಲ್‍ನ್ನು ಬಂಕ್ ಮ್ಯಾನೇಜರ್ ಮೂಲಕ ಆಳತೆ ಮಾಡಿಸಿದಾಗಲೂ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದ್ದು, ಬಂಕ್ ಸೀಜ್ ಮಾಡುವಂತೆ ಸಾರ್ವಜನಿಕರು ಪಟ್ಟು ಹಿಡಿದರು. ಸ್ಥಳಕ್ಕೆ ಆಹಾರ ಇಲಾಖೆ ಡಿ.ಡಿ. ಮಹೇಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಇದನ್ನು ನೋಡಲ್ ಆಫೀಸರ್ ಗಮನಕ್ಕೆ ತರಲಾಗುವುದು. ಮತ್ತು ತೂಕ ಮತ್ತು ಅಳತೆ ಇಲಾಖೆಯಿಂದ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ರಾಮನಹಳ್ಳಿ ಶಿವರಾಜ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೆಟ್ರೋಲ್ ಬಂಕ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News