ಶಿವಮೊಗ್ಗ ಸೇರಿ ಮೂರು ಜಿಲ್ಲೆಗಳ ಪಾಲಿಕೆ ಚುನಾವಣೆಗೆ ಹೈಕೋರ್ಟ್‌ನಿಂದ ಹಸಿರು ನಿಶಾನೆ

Update: 2018-08-09 16:25 GMT

ಬೆಂಗಳೂರು, ಆ.9: ಶಿವಮೊಗ್ಗ, ಮೈಸೂರು ಮತ್ತು ತುಮಕೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಮೈಸೂರು ಹಾಗೂ ತುಮಕೂರು ಪಾಲಿಕೆಗಳ ವಾರ್ಡ್ ಮರುವಿಂಗಡಣೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್‌ಗಳಿಗೆ ಮೀಸಲು ನಿಗದಿಪಡಿಸಿದ ಹೊರಡಿಸಲಾದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಹಲವು ತಕರಾರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಗುರುವಾರ ಅರ್ಜಿಗಳನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿತು.

ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸುವುದರಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಂಡಂತಾಗಿದೆ. ಮತ್ತೊಂದೆಡೆ ವಾರ್ಡ್‌ಗಳ ಪುನರ್ ವಿಂಗಡಣೆ ಮತ್ತು ಮೀಸಲು ನಿಗದಿಪಡಿಸಿ ಆಯೋಗವು ಹೊರಡಿಸಿರುವ ಅಧಿಸೂಚನೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂಬ ಬಗ್ಗೆ ಅರ್ಜಿದಾರರು ಪ್ರಬಲ ಅಂಶಗಳನ್ನು ಮನವರಿಕೆ ಮಾಡಿಕೊಟ್ಟಿಲ್ಲ. ಮೇಲಾಗಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಪ್ರಕಿಯೆಗಳು ಸೆ.5ರೊಳಗೆ ಪೂರ್ಣಗೊಳ್ಳಬೇಕಿದೆ. ಈ ಹಂತದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ.

ನಿಯಮ ರೂಪಿಸಿದ್ದಕ್ಕೆ ಬೇಸರ: ರಾಜ್ಯದ ನಗರದ ಸ್ಥಳೀಯ ಸಂಸ್ಥೆಗಳಿಗೆ ಕಳೆದ 40 ವರ್ಷಗಳಿಂದ ನಿರ್ದಿಷ್ಟ ನಿಯಮಗಳನ್ನು ರೂಪಿಸದ ರಾಜ್ಯ ಸರಕಾರದ ಧೋರಣೆ ಬಗ್ಗೆ ನ್ಯಾಯಾಲಯವು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದೆ.

ಕೆಎಂಸಿ ಕಾಯ್ದೆ ರಚನೆಗೊಂಡು 40 ವರ್ಷ ಪೂರ್ಣಗೊಂಡಿದೆ. ಆದರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರಕಾರ ಮಾತ್ರ ನಿರ್ದಿಷ್ಟ ಮೀಸಲು ನಿಯಮಗಳನ್ನು ರೂಪಿಸಿಲ್ಲ. ಪ್ರತಿಬಾರಿಯೂ ಹೊಸ ಜನಗಣತಿ ವರದಿ ಆಧರಿಸಿ ತಾತ್ಕಾಲಿಕ ಹಾಗೂ ಏಕಪಕ್ಷೀಯ ಮಾರ್ಗಸೂಚಿಗಳನ್ನು ರಚಿಸಿಕೊಂಡೇ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ವಾರ್ಡ್ ಮರು ವಿಂಗಡನೆ ಹಾಗೂ ಮೀಸಲು ನಿಗದಿ ಮಾಡಲಾಗುತ್ತಿದೆ. ಈ ಕ್ರಮ ಕಾನೂನಿನ ಉಲ್ಲಂಘನೆ ಹಾಗೂ ಸಂವಿಧಾನ ಬಾಹಿರವಾಗಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಅಲ್ಲದೆ, ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಚುನಾವಣಾ ಆಯೋಗವು ಮೀಸಲು ನಿಗದಿ ಹಾಗೂ ವಾರ್ಡ್ ಮರುವಿಂಗಡನೆ ಕುರಿತು ನ್ಯಾಯಾಲಯಕ್ಕೆ ಧಾವಿಸುತ್ತಾರೆ. ಆದರೆ, ಚುನಾವಣೆ ಪೂರ್ವದಲ್ಲೇ ಅರ್ಜಿಗಳನ್ನು ದಾಖಲಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಿಯಮ ರೂಪಿಸಲು ಕ್ರಮ: ಆದ್ದರಿಂದ ರಾಜ್ಯ ಸರಕಾರವು ಇನ್ನಾದರೂ ಕೆಎಂಸಿ ಕಾಯ್ದೆಯ ಸೆಕ್ಷನ್ 7(2) ಅನ್ವಯ ಮತ್ತು ಸಂವಿಧಾನದ 243(ಟಿ) ಅನುಗುಣವಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ನೀತಿ ರಚನೆಗೆ ಅಗತ್ಯ ಕ್ರಮ ಜರುಗಿಸಲಿದೆ ಎಂಬುದಾಗಿ ನ್ಯಾಯಾಲಯವು ತೀವ್ರವಾದ ನಂಬಿಕೆ ಹಾಗೂ ಭರವಸೆಯನ್ನು ಹೊಂದಿದೆ ಎಂದು ತೀರ್ಪಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ.

ಮತದಾರರ ಪಟ್ಟಿಗೆ ಸೇರಿಸಿ: ಇದೇ ವೇಳೆ ಮೈಸೂರಿನ ಪ್ರೀತಿ ಹಾಗೂ ಸಾಯಿ ಬಡಾವಣೆಯ ನಿವಾಸಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದ ನ್ಯಾಯಪೀಠ, ಆ ಕುರಿತು ಸ್ಥಳೀಯರು ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

ಶಿವಮೊಗ್ಗ, ತುಮಕೂರು ಹಾಗೂ ಮೈಸೂರು ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಮರುವಿಂಗಡಣೆ ಮಾಡುವ ವೇಳೆ ಸರಕಾರ ಮಾರ್ಗಸೂಚಿಗಳನ್ನು ಪಾಲಿಸಿಲ್ಲ. ಹೊಸ ವಾರ್ಡ್‌ಗಳ ರಚನೆ ವೇಳೆ ಭೌಗೋಳಿಕ ಅಂಶಗಳನ್ನು ಪರಿಗಣಿಸಿಲ್ಲ. ಇನ್ನು ಮೀಸಲು ನಿಗದಿಯಲ್ಲಿ ರೋಸ್ಟರ್ ಪದ್ಧತಿ ಪಾಲಿಸಿಲ್ಲ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News