ಹಾಸನ: ಕೇಂದ್ರ ಸರಕಾರದ ಜನ ವಿರೋಧಿ ನೀತಿಗೆ ಖಂಡನೆ; ಡಿಸಿ ಕಚೇರಿಗೆ ಮುತ್ತಿಗೆ ಯತ್ನ

Update: 2018-08-09 17:39 GMT

ಹಾಸನ,ಆ.09: ರೈತರ ಮತ್ತು ಕೂಲಿಕಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಕೇಂದ್ರ ಸರಕಾರದ ಜನ ವಿರೋಧಿ ಆರ್ಥಿಕ ನೀತಿ ಖಂಡಿಸಿ ಜನಪರ ಹಕ್ಕೋತ್ತಾಯಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಈ ವೇಳೆ ಅವರನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಮುಂದಿನ ಗೇಟನ್ನು ಭದ್ರಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇ.50 ರಷ್ಟು ಲಾಭಾಂಶ ಸೇರಿದಂತೆ ನಿಗಧಿ ಪಡಿಸುವ ಬೆಂಬಲ ಬೆಲೆಯನ್ನು ಕಾಯ್ದೆಯನ್ನಾಗಿಸಬೇಕು ಎಂದು ಒತ್ತಾಯಿಸಿದರು. ತಕ್ಷಣವೇ ರೈತರು ಹಾಗೂ ಕೂಲಿ ಕಾರ್ಮಿಕರರ ಸಾಲ ಮನ್ನಾಮಾಬೇಕು. ಕೇರಳದ ಮಾದರಿಯಲ್ಲಿ ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಎಲ್ಲಾ ಬಡವರಿಗೆ ಹಿತ್ತಲು ಸಹಿತ ಉಚಿತ ಮನೆಯನ್ನು ಕಟ್ಟಿಕೊಡಬೇಕು, ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಎಲ್ಲಾ ಬಡವರಿಗೆ ತಲಾ 05 ಎಕರೆ ಭೂಮಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಉದ್ಯೋಗ ಖಾತ್ರಿ ಕೆಲಸವನ್ನು 100 ದಿನಗಳ ಕಾಲ ಕಡ್ಡಾಯವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು. ಬೆಳೆ ವಿಮೆ ಯೋಜನೆಯನ್ನು ರೈತ ಸ್ನೇಹಿಯಾಗಿ ಬದಲಾಯಿಸಬೇಕು. ರೈತರು- ಕೂಲಿಕಾರರಿಗೆ ತಲಾ 5,000 ರೂ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಕೇಂದ್ರ ಸರ್ಕಾರ ಕಳೆದ 4 ವರ್ಷಗಳಿಂದ ಯಾವುದೇ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ರೈತರಿಗೆ ಅನ್ಯಾಯ ಮಾಡಿದೆ. ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೂ ಹಕ್ಕುಪತ್ರ ನೀಡಬೇಕು. ಕಾರ್ಮಿಕರಿಗೆ ಕನಿಷ್ಟ ವೇತನ 18 ಸಾವಿರ ರೂ ಜಾರಿಯಾಗಬೇಕೆಂದು ತಮ್ಮ ಬೇಡಿಕೆಯನ್ನು ಮುಂದಿಟ್ಟರು.

ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನಲ್ಲಿ ‘ಜೈಲ್ ಬರೋ’ ಚಳುವಳಿ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ವಿರೋದ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರಲ್ಲಿ ಮಹಿಳೆಯರು ಸೇರಿ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದರು. 

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ನವೀನ್‍ಕುಮಾರ್, ಸಿಐಟಿಯುನ ಮುಖಂಡ ಧರ್ಮೇಶ್, ಡಿ.ಎಲ್.ರಾಘವೇಂದ್ರ, ವಸಂತಕುಮಾರ್, ಫೃಥ್ವಿ, ಅರವಿಂದ ಇತರರು ಬಂಧಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News