ಮೈಸೂರು: ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ರೈತ ಸಂಘ, ಸಿಐಟಿಯು ಧರಣಿ

Update: 2018-08-09 17:48 GMT

ಮೈಸೂರು,ಆ.9: ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ, ರೈತ ಕಾರ್ಮಿಕರ ಪರವಾದ ನೀತಿಗಳ ಜಾರಿಗಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ನಾಗರಿಕರಿಗೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದ್ದರು. ಕಪ್ಪುಹಣ ಹೊರಗೆಳೆದು ಜನತೆಯ ಖಾತೆಗೆ ತಲಾ 15ಲಕ್ಷರೂ.ಜಮೆ ಮಾಡಲಾಗುವುದು. ರೈತರ ಆತ್ಮಹತ್ಯೆ ನಿಲ್ಲಲಿದೆ, ರೈತರು ಬೆಳೆದ ಬೆಳೆಗೆ ಅದರ ಒಟ್ಟು ಉತ್ಪಾದನಾ ಖರ್ಚಿಗೆ  ಶೇ.50 ಲಾಭಾಂಶ ಸೇರಿಸಿ ಬೆಂಬಲ ಬೆಲೆ ನೀಡಲಾಗುವುದು ಎಂದಿದ್ದರು. ಆದರೆ ಯಾವ ಆಶ್ವಾಸನೆಗಳನ್ನೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ. ಹಸಿವಿನಿಂದ ಸಾವು ಹೆಚ್ಚುತ್ತಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಕೃಷಿರಂಗ ತೀವ್ರ ಬಿಕ್ಕಟ್ಟಿನಲ್ಲಿದೆ. ಬಗರ್ ಹುಕುಂ ಸಾಗುವಳಿದಾರರು ಸಾಗುವಳಿ ಪತ್ರ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಾಲಬಾಧಿತ ರೈತರ ಸಾಲಮನ್ನಾ ಮಾಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಲೆಕ್ಕಿಸಲಾದ ಒಟ್ಟು ವೆಚ್ಚಕ್ಕೆ ಲಾಭಾಂಶ ಸೇರಿಸಿ ನಿಗದಿಪಡಿಸಲಾದ ಕನಿಷ್ಠ ಬೆಂಬಲ ಬೆಲೆ ಖಾತರಿ ದೊರೆಯುವಂತೆ ಕಾಯ್ದೆಯಾಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಎನ.ಕೆ.ಬಾಲಾಜಿರಾವ್, ಪ್ರಧಾನಕಾರ್ಯದರ್ಶಿ ಜಿ.ಜಯರಾಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News