ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕೆಲಸ ಮಾಡಿಲ್ಲ: ಕೆ.ಎಸ್ ಈಶ್ವರಪ್ಪ

Update: 2018-08-09 17:50 GMT

ಮೈಸೂರು,ಆ.9: ನಾವು ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರನ್ನು ಖರೀದಿಸುವ ಕೆಲಸ ಮಾಡಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಗುರುವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೈ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂಬ ಸಚಿವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಶಾಸಕರನ್ನು ಖರೀದಿಸುವ ಕೆಲಸ ಮಾಡಿಲ್ಲ, ಕಾಂಗ್ರೆಸ್‍ನವರು ಆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಕಾಂಗ್ರೆಸ್ ಶಾಸಕರು ಅಷ್ಟೊಂದು ದುರ್ಬಲರೇ ಎಂದು ಪ್ರಶ್ನಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಕೈಗೊಂಡಿದ್ದು, ಒಟ್ಟು ಮೂರು ತಂಡಗಳಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ನನ್ನ ನೇತೃತ್ವದಲ್ಲಿ ಮೂರು ತಂಡಗಳಲ್ಲಿ  ಪ್ರವಾಸ ನಡೆಯುತ್ತಿದೆ. ನನಗೆ ಶಾಸಕ ಸಿಟಿ ರವಿ, ಲಕ್ಷಣ್ ಸವದಿ ಹಲವು ಶಾಸಕರು ಸಾಥ್ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗಗಳಿಗೆ ಕೊಟ್ಟಿರುವ ಕೊಡುಗೆ ಜನರಿಗೆ ತಿಳಿಸಲಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಂಬೇಡ್ಕರ್ ಉದ್ದೇಶ ಈಡೇರಿಸಿರಲಿಲ್ಲ. ಆದರೆ ಪ್ರಧಾನಿ ಮೋದಿ ಆ ಕೆಲಸವನ್ನು ಮಾಡಿದ್ದಾರೆ ಎಂದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ರಾಜೇಂದ್ರ, ಆನೇಕಲ್ ದೊಡ್ಡಯ್ಯ, ಶಿವಕುಮಾರ್, ಜೋಗಿ ಮಂಜು, ಸುರೇಶ್ ಬಾಬು, ಬಿ.ಎಂ.ರಘು, ರಮೇಶ್ ಕುರುಬಾರಳ್ಳಿ, ಮಂಜು ಚಿತ್ರದುರ್ಗ, ಅಶೋಕ, ಜಯರಾಮ್, ರಾಜಕುಮಾರ್, ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News