ಕೊಳ್ಳೇಗಾಲ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಚಿವ ಮಹೇಶ್

Update: 2018-08-09 17:58 GMT

ಕೊಳ್ಳೇಗಾಲ,ಆ.09: ಕ್ಷೇತ್ರದ ಎಲ್ಲಾ ಬ್ಲಾಕ್‍ಗಳ ಸರ್ಕಾರಿ ಶಾಲೆಗಳ ದುರಸ್ಥಿಯನ್ನು ಇನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಿ ಹೊಸರೂಪ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಹೇಳಿದರು.

ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 7.28 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಅನ್ನಪೂರ್ಣ ಅಡುಗೆ ಮನೆ ಕಟ್ಟಡ ಹಾಗೂ ಎಸ್‍ಸಿಪಿ ಯೋಜನೆಯಡಿ 10.20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯಿಂದ 2 ಕೋಟಿ ಅನುದಾನವನ್ನು ತರುವ ಮೂಲಕ ಕ್ಷೇತ್ರದ ಸರ್ಕಾರಿ ಶಾಲೆಗಳ ಹೆಚ್ಚುವರಿ ಕಟ್ಟಡಗಳು, ಶೌಚಾಲಯ, ಕಾಪೌಂಡ್ ನಿರ್ಮಾಣ, ಹಳೇ ಕಟ್ಟಡ ದುರಸ್ತಿಗೊಳಿಸುವುದಾಗಿ ಹೇಳಿದರು. ಈ ಯೋಜನೆಗಳು ಪಂಚವಾರ್ಷಿಕ ಯೋಜನೆಯಂತೆ ಮಾಡದೇ ಶೀಘ್ರದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದರು. ಮೊದಲು ಶಿಕ್ಷಣ ಇಲಾಖೆ ಅಭಿವೃದ್ಧಿಯಾಗದಿದ್ದರೆ ಬೇರೆ ಯಾವುದೇ ಇಲಾಖೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಸುಸಜ್ಜಿತ ಶಾಲೆಗಳು ನಿರ್ಮಾಣ ಮಾಡಲು 5 ಸಾವಿರ ಕೋಟಿ ಅನುದಾನ ಅವಶ್ಯಕತೆ ಇದೆ. ಆದರೆ ಶಿಕ್ಷಣ ಇಲಾಖೆಯಲ್ಲಿ 450 ಕೋಟಿ ಅನುದಾನವಿರುವುದರಿಂದ ಶಾಲೆಗಳ ಕಟ್ಟಡಗಳ ದುರಸ್ಥಿ, ಕಾಪೌಂಡ್ ಹಾಗೂ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲು ಬಳಸಲಾಗುವುದು ಎಂದರು.
ರಾಜ್ಯದಲ್ಲಿರುವ ಎಲ್ಲಾ ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಒಂದೊಂದು ಶಾಲೆಗಳು ಅಥವಾ ಅವರೇ ಓದಿರುವ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಅಭಿವೃದ್ಧಿಗೆ ಕೈಜೋಡಿಸುವಂತೆ ತಿಳಿಸಲಾಗುವುದು. ನಾನು ವಿದ್ಯಾಭ್ಯಾಸ ಮಾಡಿದ ಎಂ.ಜಿ.ಎಸ್.ವಿ ಶಾಲೆಯನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಬಯಲು ಶೌಚಾಲಯ ಮುಕ್ತಗೊಳಿಸುವ ಸಲುವಾಗಿ ಗಾಂಧಿ ಜಯಂತಿಯ ಒಳಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಖ್ಯಮಂತ್ರಿರವರು ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಗ್ರಾ.ಪಂ ಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭ ಮಕ್ಕಳೊಂದಿಗೆ ಸಚಿವರು ಮಧ್ಯಾಹ್ನದ ಉಪಹಾರ ಮಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಮುಳ್ಳೂರು ಕಮಲ್, ಗ್ರಾ.ಪಂ ಅಧ್ಯಕ್ಷೆ ಶಾರದಾಕುಮಾರಿ, ಉಪಾಧ್ಯಕ್ಷ ನಂಜುಂಡಸ್ವಾಮಿ, ಸದಸ್ಯ ಸೋಮಣ್ಣ ಉಪ್ಪಾರ್, ಭೂಸೇನಾ ಇಲಾಖೆ ಎಇಇ ರಮೇಶ್, ಬಿಇಒ ಚಂದ್ರಪಾಟೀಲ್, ಬಿಆರ್‍ಸಿ ಮಂಜುಳ, ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕುಮಾರ್, ಮುಖ್ಯ ಶಿಕ್ಷಕ ಚನ್ನಮಲ್ಲಪ್ಪ, ಗ್ರಾ.ಪಂ ಪಿಡಿಒ ರಾಜೇಶ್, ಕಾರ್ಯದರ್ಶಿ ಉಷಾರಾಣಿ, ಮುಖಂಡರುಗಳಾದ ನಾಡಗೌಡ ಇಂದ್ರೇಶ್, ವಿಜಯ್, ಮಹದೇವಸ್ವಾಮಿ, ಲೋಕೇಶ್ ಹಾಗೂ ಇನ್ನಿತರರು ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News