ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೈಲ್‍ಭರೋ; ಹಲವರ ಬಂಧನ

Update: 2018-08-09 18:03 GMT

ಮಂಡ್ಯ, ಆ.9: ರೈತ, ಕಾರ್ಮಿಕ, ಕೂಲಿಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು, ಕರ್ನಾಟಕ ಪ್ರಾಂತ ರೈತಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಮಂಡ್ಯ, ಮದ್ದೂರು, ಮಳವಳ್ಳಿ, ಇತರೆಡೆ ಗುರುವಾರ ಜೈಲ್‍ಭರೋ ಚಳವಳಿ ನಡೆಯಿತು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಸಮಾವೇಶಗೊಂಡು ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ವಿಶ್ವೇಶ್ವರಯ್ಯ ಪ್ರತಿಮೆ ಎದುರಿನ ಹೆದ್ದಾರಿ ತಡೆಗೆ ಮುಂದಾದಾಗ ಪೊಲೀಸರು ಅವರನ್ನು ಬಂಧಿಸಿ ನಂತರ, ಬಿಡುಗಡೆ ಮಾಡಿದರು.

ಕೇಂದ್ರದ ನಾಲ್ಕು ವರ್ಷಗಳ ಆಡಳಿತದ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ಕಾರ್ಮಿಕ ವಿರೋಧಿ ನೀತಿ, ನಿರುದ್ಯೋಗವು ಬಡವರ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ. ರೈತರ ಆತ್ಮಹತ್ಯೆ, ವಲಸೆ ಹೆಚ್ಚಾಗಿದೆ. ಉದ್ಯೋಗ ಖಾತ್ರಿಗೆ ಹಣ ಕಡಿತಗೊಳಿಸಿ ಕೂಲಿಕಾರರ ಹೊಟ್ಟೆಯ ಮೇಲೆ ಬರೆ ಎಳೆದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮೂರು ದಶಕಗಳಲ್ಲಿ ರೂಪಿಸಿದ ನವ ಉದಾರೀಕರಣ ನೀತಿಗಳು, ನಮ್ಮ ದೇಶದ ಬಹುಸಂಖ್ಯಾತ ಕಾರ್ಮಿಕರ ಮತ್ತು ಇತರೆ ದುಡಿಯುವ ಜನರ ಉತ್ತಮ ಬದುಕನ್ನು ಹಾಳು ಮಾಡಿವೆ. ಪ್ರಸ್ತುತ ಕೇಂದ್ರದ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರಕಾರ ನಾಲ್ಕು ವರ್ಷಗಳಲ್ಲಿ ಈ ಜನವಿರೋಧಿ ನೀತಿಗಳ ವೇಗವನ್ನು ಇನ್ನಷ್ಟು ಹೆಚ್ಚಿಸಿವೆ. ಅಚ್ಚೇದಿನ್ ಘೋಷಣೆಯು ಬಂಡವಾಳಶಾಹಿಗಳು ಮತ್ತು ಶ್ರೀಮಂತರಿಗೆ ಲಾಭವಾಗಿದೆ ಎಂದು ಅವರು ಆರೋಪಿಸಿದರು.

ರೈತರ ಬೆಳೆಗಳಿಗೆ ಶಾಸನಬದ್ದ ಬೆಂಬಲ ಬೆಲೆ, ಸಾಲಮನ್ನಾ, ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಬೇಕು. ಬಂಡವಾಳ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ಕೈಬಿಟ್ಟು ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಜಾರಿಯಾಗಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ. ವೇತನ, ನೀಡಬೇಕು ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ಮಾನ್ಯತೆ, ಗುತ್ತಿಗೆ ಹಾಗೂ ಮುಂತಾದ ಖಾಯಂಯೇತರ ಕಾರ್ಮಿಕರ ಖಾಯಂ ಶಾಸನ ಜಾರಿಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಎಫ್, ಪಿಂಚಣಿ, ವಸತಿ ನೀಡಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೊಳಿಸಬೇಕು. ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಆರೋಗ್ಯದ ಹಕ್ಕು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಎಲ್.ಕೃಷ್ಣೇಗೌಡ, ಸಿಐಟಿಯುನ ಸಿ.ಕುಮಾರಿ, ಜಿ.ರಾಮಕೃಷ್ಣ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಎಂ.ಪುಟ್ಟಮಾದು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News