ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳದ ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆ

Update: 2018-08-10 11:12 GMT

ಹೊಸದಿಲ್ಲಿ, ಆ.10: ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಶುಕ್ರವಾರವೂ ಅಂಗೀಕರಿಸಿಲ್ಲ. ಈ ವಿಚಾರದಲ್ಲಿ ಸದನದಲ್ಲಿ ಸಹಮತವಿಲ್ಲದೇ ಇರುವುದರಿಂದ  ಈ ಮಸೂದೆಯ ಮೇಲಿನ ಚರ್ಚೆಯನ್ನು ಇಂದು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು.

ಕೇಂದ್ರ ಸಚಿವ ಸಂಪುಟ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆಗೆ ಗುರುವಾರ ಅನುಮೋದನೆ ನೀಡಿತ್ತು.  ಶುಕ್ರವಾರ ಅದು ರಾಜ್ಯಸಭೆಯ ಮುಂದೆ ಬರಬೇಕಿತ್ತಾದರೂ ಅದನ್ನೀಗ ಮುಂದೂಡಲಾಗಿದೆ. ಇಂದು ಸಂಸತ್ತಿನ ಮಳೆಗಾಲದ ಅಧಿವೇಶನದ ಕೊನೆಯ ದಿನವಾಗಿತ್ತು. ಸರಕಾರ ತನ್ನೆಲ್ಲಾ ರಾಜ್ಯಸಭಾ ಸದಸ್ಯರಿಗೂ ಇಂದು ಹಾಜರಾಗುವಂತೆ ಕೂಡ ತಿಳಿಸಿತ್ತು. ಆದರೆ ಸದಸ್ಯರಲ್ಲಿ ಈ ವಿಚಾರದ ಬಗ್ಗೆ ಒಗ್ಗಟ್ಟಿಲ್ಲವೆಂದು ಸಭಾಪತಿ ವೆಂಕಯ್ಯ ನಾಯ್ಡು ಹೇಳಿದರು.

ಈ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಲ್ಲಿ ಅದು ಸಂತ್ರಸ್ತೆ ಅಥವಾ ಆಕೆಯ ಕುಟುಂಬ ಸದಸ್ಯರಿಗೆ  ದೂರು ನೀಡುವ ಅಧಿಕಾರ ನೀಡುತ್ತದೆ. ಮ್ಯಾಜಿಸ್ಟ್ರೇಟರಿಗೆ ಜಾಮೀನು ನೀಡುವ ಅಧಿಕಾರವನ್ನೂ ಈ ಮಸೂದೆ ನೀಡುತ್ತದೆ.

ಇಂದು ಮಳೆಗಾಲದ ಅಧಿವೇಶನದ ಕೊನೆಯ ದಿನವಾಗಿದ್ದರಿಂದ ಲೋಕಸಭೆ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News