ಮಲೆನಾಡಿನಲ್ಲಿ ಮುಂದುವರಿದ ಮಳೆ : ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಳ

Update: 2018-08-10 12:22 GMT

ಚಿಕ್ಕಮಗಳೂರು, ಆ.10: ಜಿಲ್ಲೆಯ ಮಲೆನಾಡು ಭಾಗದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರವೂ ಮುಂದುವರಿದಿದೆ. ಎರಡು ದಿನಗಳಿಂದ ಸುರಿದ ಮಳೆಗೆ ಮೂಡಿಗೆರೆ ತಾಲೂಕಿನ ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ 8ನೇ ಬಾರಿಗೆ ಮುಳುಗಿದ್ದು. ಶುಕ್ರವಾರ ಮಳೆ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ಸೇತುವೆಯೂ ಸಂಚಾರಕ್ಕೆ ಮುಕ್ತವಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗಿನಿಂದ ಸಂಜೆಯವರೆಗೂ ಸಾಧಾರಣ ಮಳೆಯಾಗಿದೆ. ಮೂಡಿಕೆರೆ, ಕಳಸ ಹೊರನಾಡು, ಕೊಟ್ಟಿಗೆಹಾರ, ಎನ್.ಆರ್.ಪುರ, ಶಂಗೇರಿ, ಕೊಪ್ಪ ಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರು ನಿರಂತರವಾಗಿ ಸಾಧಾರಣ ಮಳೆ ಸುರಿದಿದೆ. ಈ ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆಯಾದರೂ ಅಪಾಯದ ಮಟ್ಟಕ್ಕೆ ತಲುಪಿಲ್ಲ. 

ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಮಲೆನಾಡು ಭಾಗದ ತುಂಗಾ, ಭದ್ರಾ, ಹೇಮಾವತಿ ನದಿ ಪಾತ್ರದ ಜನರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ನೀಡಿದೆ. ಜಿಲ್ಲಾ ಪೊಲೀಸ್ ಇಲಾಖೆ ನದಿಪಾತ್ರಕ್ಕೆ ಯಾರೂ ತೆರಳದಂತೆ ಮನವಿ ಮಾಡಿದ್ದು, ನದಿ ಪ್ರದೇಶಕ್ಕೆ ಪ್ರವಾಸಿಗರು ತೆರಳದಂತೆ ಕ್ರಮ ವಹಿಸುವಂತೆ ರೆಸಾರ್ಟ್, ಹೋಂ ಸ್ಟೇಗಳಲ್ಲಿ ಸೂಚನಾ ಫಲಕ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ನದಿಪಾತ್ರದಲ್ಲಿ ಯಾರು ಸಂಚರಿಸದಂತೆ ಸ್ಥಳೀಯ ಪೊಲೀಸ್ ಇಲಾಖೆ ಕ್ರಮಕೈಗೊಂಡಿದೆ. 

ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್,ಪುರ, ಮೂಡಿಗೆರೆ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು. ಬಯಲು ಸೀಮೆ ಭಾಗವಾದ ಕಡೂರು, ಬೀರೂರು, ತರೀಕೆರೆ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಪ್ರದೇಶದಲ್ಲಿ ಮೋಡ ಕವಿದ ವಾತವರಣವಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. 

ಕಳೆದ ಕೆಲ ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದ ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ನಂತರ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಭಾಗದ ಜನರು ಸ್ಪಲ್ಪಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಕಳೆದೆರೆಡು ದಿನಗಳಿಂದ ಮತ್ತೆ ಮಳೆಯಾಗುತ್ತಿರುವುದರಿಂದ ಈ ಭಾಗದ ಅಡಿಕೆ, ಕಾಫಿ, ಕಾಳು ಮೆಣಸು ಮತ್ತು ತರಕಾರಿ ಬೆಳೆಗಾರರಲ್ಲಿ ಮತ್ತೇ ಆತಂಕ ಮೂಡಿಸಿದೆ. ನಿರಂತರ ಮಳೆಯಿಂದ ತಾವು ಬೆಳೆದ ಬೆಳೆಗಳಿಗೆ ರೋಗ ಭಾದಿಸುವ ಆತಂತ ಕಾಡುತ್ತಿದೆ. ಇಂದು ಕಡೆ ರೋಗಭಾದೆಯಾದರೇ ಮತ್ತೊಂದು ಕಡೆ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ತಾವು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂಬ ಆತಂಕ ಮನೆಮಾಡಿದೆ. 

ಮಳೆ ವಿವರ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ 105, ಕಿಗ್ಗದಲ್ಲಿ 71.6, ಮೂಡಿಗೆರೆ ತಾಲ್ಲೂಕಿನ ಕಳಸದಲ್ಲಿ 81.1, ಕೊಪ್ಪ ತಾಲ್ಲೂಕಿನ ಕಮ್ಮರಡಿಯಲ್ಲಿ 48.5 ಮಿ.ಮೀ. ಮಳೆಯಾಗಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆಯ ವಿವರ ಇಂತಿದೆ: (ಮಳೆ ವಿವರ ಮಿ.ಮೀ.ಗಳಲ್ಲಿ)
ಚಿಕ್ಕಮಗಳೂರು ತಾಲೂಕಿನ ವಸ್ತಾರೆ 5.2, ಜೋಳದಾಳು 3, ಆಲ್ದೂರು 4.2, ಕೆ.ಆರ್.ಪೇಟೆ 2.2, ಅತ್ತಿಗುಂಡಿ 16, ಸಂಗಮೇಶ್ವರಪೇಟೆ 3.8, ಬ್ಯಾರವಳ್ಳಿ 30.5, ಕಳಸಾಪುರ 2.4, ಮಳಲೂರು 1.1, ದಾಸರಹಳ್ಳಿಯಲ್ಲಿ 5.6 ಮಿ.ಮೀ. ಮಳೆಯಾಗಿದೆ.
ಕಡೂರು ತಾಲೂಕಿನ ಗಿರಿಯಾಪುರ 7.5ಮಿ.ಮೀ ಮಳೆಯಾಗಿದೆ. ಕೊಪ್ಪ ತಾಲೂಕಿನ ಕೊಪ್ಪ 20, ಹರಿಹರಪುರ 36, ಜಯಪುರ 11, ಕಮ್ಮರಡಿ 48.5, ಬಸರಿಕಟ್ಟೆ 13.9, ಮೂಡಿಗೆರೆ ತಾಲೂಕಿನ ಮೂಡಿಗೆರೆ 16.8, ಕೊಟ್ಟಿಗೆಹಾರ 12.4, ಜಾವಳಿ 8, ಗೋಣಿಬೀಡು 12.2 ಕಳಸ 18.1ಮಿ.ಮೀ. ಮಳೆಯಾಗಿದೆ.
ನರಸಿಂಹರಾಜಪುರ ತಾಲೂಕಿನ ನರಸಿಂಹರಾಜಪುರ 15.4, ಬಾಳೆಹೊನ್ನೂರು 6.6, ಮೇಗರಮಕ್ಕಿ 9, ಶೃಂಗೇರಿ ತಾಲೂಕಿನ ಶೃಂಗೇರಿ 55, ಕಿಗ್ಗ 71.6, ಕೆರೆಕಟ್ಟೆ 105.4ಮಿ.ಮೀ. ಮಳೆಯಾಗಿದೆ.  ತರೀಕೆರೆ ತಾಲೂಕಿನ ತರೀಕೆರೆ 3.2, ಲಕ್ಕವಳ್ಳಿ 5.2, ಅಜ್ಜಂಪುರ 3, ಶಿವಾನಿ5  ಬುಕ್ಕಾಂಬುದಿ 6, ಲಿಂಗದಹಳ್ಳಿ 5.2, ತಣಿಗೆಬೈಲು 4.6, ಹುಣಸಘಟ್ಟ 6 ಮತ್ತು ರಂಗೇನಹಳ್ಳಿಯಲ್ಲಿ 4.2 ಮಿ.ಮೀ. ಮಳೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News