ಟಿಬೆಟಿಯನ್ನರಿಗೆ ಸಂಪೂರ್ಣ ಸಹಕಾರ: ಸಿಎಂ ಕುಮಾರಸ್ವಾಮಿ

Update: 2018-08-10 14:03 GMT

ಬೆಂಗಳೂರು, ಆ.10: ರಾಜ್ಯ ವ್ಯಾಪ್ತಿ ನೆಲೆಸಿರುವ ಟೆಬೆಟಿಯನ್ನರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಟಿಬೆಟಿಯನ್ನರು ಗಡಿಪಾರಾಗಿ ಆರು ದಶಕ ಕಳೆದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ ಜನರು ಆಯೋಜಿಸಿದ್ದ 'ಧನ್ಯವಾದ ಕರ್ನಾಟಕ' ಕೃತಜ್ಞತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಟಿಬೆಟಿಯನ್ನರಿಗೆ ಆಶ್ರಯ ನೀಡಲಾಗಿತ್ತು. ಅಂದಿನಿಂದಲೂ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಮುಂದೆಯೂ ಟಿಬೆಟಿಯನ್ನರ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು, ಉತ್ತರ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಟಿಬೆಟಿಯನ್ನರಿಗೆ ಭೂಮಿ ಮಂಜೂರು ಮಾಡಲಾಗಿತ್ತು. ಕರ್ನಾಟಕ ಮತ್ತು ಟಿಬೆಟ್ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಕುಮಾರಸ್ವಾಮಿ ನುಡಿದರು.

ಟಿಬೆಟಿಯನ್ ಧರ್ಮಗುರು ದಲೈಲಾಮಾ ಮಾತನಾಡಿ, ಭಾರತ ಟಿಬೆಟಿಯನ್ನರ ಗುರುವಾಗಿತ್ತು. ನಳಂದ ವಿಶ್ವವಿದ್ಯಾಲಯದ ಮೂಲಕ ಪ್ರಾಚೀನ ಕಾಲದ ಜ್ಞಾನ, ತತ್ವ ಹಾಗೂ ವೈವಿಧ್ಯತೆಯ ಗುಣಗಳನ್ನು ನಮಗೆ ಕಲಿಸಿಕೊಟ್ಟಿದೆ. ಇಂತಹ ಸಂಸ್ಕೃತಿ, ಆಚಾರ ವಿಚಾರ ಹಾಗೂ ಅಹಿಂಸಾ ಪಾಲನೆಯ ತತ್ವಗಳನ್ನು ಭಾರತಕ್ಕೆ ಮರಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ನೆಹರೂ ಕೊಡುಗೆ ಅಪಾರ
ದೇಶದಲ್ಲಿ ಟಿಬೆಟಿಯನ್ನರ ಸಂಸ್ಕೃತಿ, ಶಿಕ್ಷಣ ಪದ್ಧತಿ ಸಂರಕ್ಷಿಸಿ ಬೆಳೆಸುವುದಕ್ಕೆ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಕೊಡುಗೆ ಅಪಾರ. ಟಿಬೆಟಿಯನ್ನರ ಗಡಿಪಾರು ಕುರಿತು 1955ರಲ್ಲಿ ಚೀನಾದಲ್ಲಿ ನಡೆದ ಮಾತುಕತೆ ವಿಫಲವಾದ ನಂತರ ಆತ್ಮವಿಶ್ವಾಸದಿಂದ ಭಾರತಕ್ಕೆ ಬಂದಿದ್ದೆ. ಅಂದಿನ ಪ್ರಧಾನಿ ನೆಹರೂ ಟಿಬೆಟಿಯನ್ನರಿಗೆ ಆಶ್ರಯ ಕಲ್ಪಿಸಲು ಸಮಿತಿ ರಚಿಸಿದ್ದರು.
-ದಲೈಲಾಮಾ, ಟಿಬೆಟಿಯನ್ ಧರ್ಮ ಗುರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News