ಫಸಲ್ ಭೀಮಾ ಯೋಜನೆ ವಿಮೆ ಮಾಡಿಸಲು ರೈತರ ಮನವೊಲಿಸಿ: ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ

Update: 2018-08-10 12:57 GMT

ಚಿಕ್ಕಮಗಳೂರು, ಆ.10: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ರೈತರ ಮನವೊಲಿಸಿ ಮುಂಗಾರಿಗೆ ಬೆಳೆ ವಿಮೆ ಮಾಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2018-19ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಟಾನ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ರೈತರು ವಿಮೆಗೆ ಹೆಸರು ನೋಂದಾಯಿಸಿಕೊಂಡಿರುವ ಕುರಿತು ಪ್ರಗತಿ ಪರಿಶೀಲಿಸಿ ನಿಗಧಿತ ಗುರಿಯನ್ನು ತಲುಪದೇ ಇರುವುದು ವಿಷಾದನೀಯ. ಬೆಳೆ ವಿಮೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ರೈತರಿಗೆ ಅರಿವು ಮೂಡಿಸಿ ಹೆಚ್ಚು ರೈತರು ಬೆಳೆ ವಿಮೆ ಮಾಡಿಸಲು ಮುಂದೆ ಬರುವಂತೆ ಮನವೊಲಿಸಬೇಕೆಂದರು.

2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 265.47 ಲಕ್ಷ ವಿಮಾ ಪರಿಹಾರವನ್ನು ರೈತರ ಖಾತೆಗೆ ವರ್ಗಾಯಿಸಿರುವ ಬಗ್ಗೆ ಚರ್ಚೆ ನಡೆಸಿ ರೈತರ ಬ್ಯಾಂಕ್ ಖಾತೆ ವ್ಯತ್ಯಾಸದಿಂದ ಪಾವತಿಯಾಗದ ವಿಮಾ ಪರಿಹಾರದ ಮೊತ್ತವನ್ನು ಸಂಬಂಧಿಸಿದ ಬ್ಯಾಂಕ್‍ಗಳಿಗೆ ಬಲ್ಕ್ ಪೇಮೆಂಟ್ ಮಾಡಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತಿ ಆಕ್ಸ್ ವಿಮಾ ಸಂಸ್ಥೆಯ ಪ್ರತಿನಿಧಿ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರುಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ರೈತರು ಬೆಳೆ ವಿಮೆಗಾಗಿ ಬ್ಯಾಂಕ್‍ಗಳಿಗೆ ಹಣ ಪಾವತಿಸಲು ಬಂದಾಗ ಯಾವುದೇ ಕಾರಣ ನೀಡದೆ ವಿಮೆಯ ಹಣ ಕಟ್ಟಿಸಿಕೊಳ್ಳುವಂತೆ ಬ್ಯಾಂಕ್‍ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ಈ ಮಾಹೆಯ ಆಗಸ್ಟ್ 14 ರವರೆಗೆ ಅವಕಾಶವಿದ್ದು ರೈತರು ವಿಮಾ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಕೃಷಿ ಇಲಾಖೆ ಅಧಿಕಾರಿಗಳು ನಿಗಧಿಪಡಿಸಿರುವ ಗುರಿಯಂತೆ ರೈತರನ್ನು ಬೆಳೆ ವಿಮೆ ಮಾಡಿಸಲು ಮನವೊಲಿಸಬೇಕೆಂದು ಹೇಳಿದರು.
ಸಭೆಯಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಸಿ.ಸೀತಾ, ತೋಟಗಾರಿಕೆ ಉಪನಿರ್ದೇಶಕಿ ಪೂರ್ಣಿಮಾ, ಉಪ ಕೃಷಿ ನಿರ್ದೇಶಕ ಲೋಕೇಶ್, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಲೀಡ್ ಬ್ಯಾಂಕ್ ಮ್ಯಾನೇಜರ್, ವಿಮಾ ಕಂಪನಿ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News