ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಉದ್ವಿಗ್ನ ಸ್ಥಿತಿ : ಬಿಗಿ ಪೊಲೀಸ್ ಪಹರೆ!

Update: 2018-08-10 13:38 GMT

ಶಿವಮೊಗ್ಗ, ಆ. 10: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಈದ್ಗಾ ಮೈದಾನದಲ್ಲಿ, ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ನಡೆದ ಜಗಳದಿಂದ ಶುಕ್ರವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಶುಕ್ರವಾರ ಮಧ್ಯಾಹ್ನ ಈದ್ಗಾ ಮೈದಾನದ ಬಳಿ ಭಿನ್ನ ಕೋಮಿನ ಕಡೆಯ ನೂರಾರು ಜನರು ಜಮಾಯಿಸಿದ್ದರು. ಕೆಲವರು ಪೊಲೀಸರ ಜೊತೆಯೇ ಮಾತಿನ ಚಕಮಕಿ ನಡೆಸಿದರು. ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸ್ಥಳದಲ್ಲಿ ನೆರೆದಿದ್ದವರನ್ನು ತೆರವುಗೊಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 

ಘಟನೆ ಹಿನ್ನೆಲೆ: ಈದ್ಗಾ ಮೈದಾನದ ಬಳಿ ಗುರುವಾರ ರಾತ್ರಿ ಟ್ಯಾಕ್ಸಿ ಓಡಿಸುವ ತಾಲೂಕಿನ ಹರಮಘಟ್ಟ ಸುತ್ತಮುತ್ತಲಿನ ಗ್ರಾಮಕ್ಕೆ ಸೇರಿದ ಬಸವರಾಜ್ ಮತ್ತಿತರ ಯುವಕರ ತಂಡವೊಂದು ಕುಳಿತುಕೊಂಡಿತ್ತು. ಮೈದಾನದಲ್ಲಿಯೇ ಹಣ್ಣಿನ ಅಂಗಡಿ ಹಾಕಿಕೊಂಡಿರುವ ಮುನಾವರ್ ಮತ್ತವರ ಕಡೆಯವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದೆ. ಘಟನೆಯಲ್ಲಿ ಮುನಾವರ್ ಅವರ ಮುಖಕ್ಕೆ ಗಾಯವಾಗಿದೆ. 

ತಿರುವು: ಬೆಳಿಗ್ಗೆ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸೇರಿದ ಕಾರ್ಯಕರ್ತರು ಈದ್ಗಾ ಮೈದಾನದ ಹಣ್ಣಿನ ಅಂಗಡಿಯ ಬಳಿ ಜಮಾಯಿಸಿದರು. ಈ ಪ್ರದೇಶ ಪಾಲಿಕೆಗೆ ಸೇರಿದ್ದಾಗಿದ್ದು, ಈ ಹಣ್ಣಿನ ಅಂಗಡಿ ತೆರವುಗೊಳಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. 

ಇನ್ನೊಂದೆಡೆ ಭಿನ್ನ ಕೋಮಿನವರು ಸ್ಥಳದಲ್ಲಿ ಜಮಾಯಿಸಲಾರಂಭಿಸಿದರು. ಯಾವುದೇ ಕಾರಣಕ್ಕೂ ಹಣ್ಣಿನ ಅಂಗಡಿ ತೆರವುಗೊಳಿಸಬಾರದು. ಇದು ಈದ್ಗಾ ಮೈದಾನಕ್ಕೆ ಸೇರಿದ ಜಾಗವಾಗಿದೆ ಎಂದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವಂತಾಯಿತು. ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ನೆರೆದಿದ್ದ ಎರಡೂ ಕಡೆಯವರನ್ನು ಚದುರಿಸಿದರು. ಈ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. 

ದೂರು ದಾಖಲು: ಗುರುವಾರ ರಾತ್ರಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು - ಪ್ರತಿ ದೂರು ದಾಖಲಾಗಿವೆ. ಈ ಸಂಬಂಧ ಎರಡು ಪ್ರತ್ಯೇಕ ಎಫ್‍ಐಆರ್ ಗಳನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಲಾರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News